ಲಾಹೋರ್(ಪಾಕಿಸ್ತಾನ): ಪಾಕಿಸ್ತಾನದಲ್ಲಿ ನಡೆದ ಭೀಕರ ಹತ್ಯೆ ಪ್ರಕರಣದಲ್ಲಿ ಶ್ರೀಲಂಕಾದ ಪ್ರಜೆ ಪ್ರಿಯಾಂತ ಕುಮಾರ ದಿಯವದನಾ ಅವರ ದೇಹದ ಬಹುತೇಕ ಎಲ್ಲಾ ಮೂಳೆಗಳು ಮುರಿದುಹೋಗಿವೆ. ಅವರ ದೇಹವು ಶೇಕಡಾ 99ರಷ್ಟು ಸುಟ್ಟುಹೋಗಿದೆ ಎಂದು ಮರಣೋತ್ತರ ಪರೀಕ್ಷೆಯ ವರದಿಯಿಂದ ತಿಳಿದು ಬಂದಿದೆ.
ಇಸ್ಲಾಮಿಸ್ಟ್ ಪಕ್ಷ ತೆಹ್ರೀಕ್-ಎ-ಲಬ್ಬೈಕ್ ಪಾಕಿಸ್ತಾನ್ (ಟಿಎಲ್‌ಪಿ) ಉದ್ರಿಕ್ತ ಬೆಂಬಲಿಗರು ಶುಕ್ರವಾರ ಗಾರ್ಮೆಂಟ್ಸ್ ಫ್ಯಾಕ್ಟರಿಯೊಂದರ ಮೇಲೆ ಮನಬಂದಂತೆ ದಾಳಿ ಮಾಡಿದ್ದರು. ಈ ವೇಳೆ, ಗಾರ್ಮೆಂಟ್ಸ್ ಫ್ಯಾಕ್ಟರಿಯ ಜನರಲ್ ಮ್ಯಾನೇಜರ್ ದಿಯಾವದನಾ ಅವರನ್ನು ಹೊರ ಎಳೆದೊಯ್ದು ಧರ್ಮನಿಂದನೆಯ ಆರೋಪದಡಿ ಮನಬಂದಂತೆ ಥಳಿಸಿ, ಅವರ ದೇಹಕ್ಕೆ ಬೆಂಕಿ ಹಚ್ಚಿ ಜೀವಂತ ಸುಟ್ಟು ಹಾಕಿದ್ದರು. ಈ ಘಟನೆಯ ಬಳಿಕ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ ತನಿಖೆ ಕೈಗೊಂಡಿದ್ದರು.
ಮರಣೋತ್ತರ ಪರೀಕ್ಷೆಯಲ್ಲಿ ದಿಯಾವದನಾ ಅವರ ಮೇಲೆ ನಡೆದ ದಾಳಿಯಲ್ಲಿ ಎಲ್ಲಾ ಪ್ರಮುಖ ಅಂಗಗಳು, ಹೊಟ್ಟೆ ಮತ್ತು ಅವರ ಕಿಡ್ನಿಗಳಿಗೆ ಭಾರಿ ಪ್ರಮಾಣದ ಪೆಟ್ಟು ಬಿದ್ದಿದ್ದವು. ಅವರ ದೇಹದಾದ್ಯಂತ ಚಿತ್ರಹಿಂಸೆಯ ಗುರುತುಗಳು ಗೋಚರಿಸಿದ್ದು, ಬೆನ್ನುಮೂಳೆಗಳು ಮೂರು ವಿಭಿನ್ನ ಹಂತಗಳಲ್ಲಿ ಮುರಿದುಹೋಗಿವೆ. ಬೆಂಕಿ ಹಚ್ಚಿದ್ದ ಪರಿಣಾಮ ದೇಹದ ಶೇ 99ರಷ್ಟು ಭಾಗ ಸುಟ್ಟು ಕರಕಲಾಗಿತ್ತು. ಒಂದು ಕಾಲು ಹೊರತುಪಡಿಸಿ ಅವರ ದೇಹದ ಎಲ್ಲಾ ಮೂಳೆಗಳು ಮುರಿದುಹೋಗಿದ್ದವು ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಬಹುಕೋಟಿ ಸುಲಿಗೆ ಪ್ರಕರಣ: ಬಾಲಿವುಡ್ ನಟಿ ಜಾಕ್ವೆಲಿನ್ ವಿದೇಶ ಪ್ರಯಾಣಕ್ಕೆ ನಿರ್ಬಂಧ
ಪಂಜಾಬ್ ಪೊಲೀಸ್ ವಕ್ತಾರರೊಬ್ಬರು ಮಾತನಾಡಿ, ಶವಪರೀಕ್ಷೆಯ ನಂತರ ದಿಯವದನಾ ಅವರ ದೇಹವನ್ನು ಲಾಹೋರ್‌ಗೆ ಕಳುಹಿಸಲಾಗಿದೆ. ಕಾನೂನು ವಿಧಿವಿಧಾನಗಳ ನಂತರ ವಿಶೇಷ ವಿಮಾನದ ಮೂಲಕ ಶ್ರೀಲಂಕಾಕ್ಕೆ ಕಳುಹಿಸಲಾಗುವುದು ಎಂದು ತಿಳಿಸಿದ್ದಾರೆ.