ಬೈರೂತ್: ಲೆಬನಾನ್‌ನಲ್ಲಿ ರಾಜಕೀಯ ಬಿಕ್ಕಟ್ಟು ಮುಂದುವರಿದಿದ್ದು, ಪ್ರಧಾನಿ ಮುಸ್ತಫಾ ಆದಿಬ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಆಗಸ್ಟ್ 4 ರಂದು ಬೈರೂತ್ ಬಂದರಿನಲ್ಲಿ ಭಾರಿ ಪ್ರಮಾಣದ ಸ್ಫೋಟ ಸಂಭವಿಸಿತ್ತು. ಇದು ಇಡೀ ವಿಶ್ವವೇ ಬೆಚ್ಚಿ ಬೀಳುವಂತೆ ಮಾಡಿತ್ತು. ಈ ಬೃಹತ್ ಸ್ಫೋಟ ಲೆಬನಾನ್ ಆರ್ಥಿಕತೆಯ ಮೇಲೆ ಭಾರಿ ಪರಿಣಾಮ ಬೀರಿತ್ತು. ಅಲ್ಲಿನ ಆರ್ಥಿಕ ಮತ್ತು ಹಣಕಾಸಿನ ಬಿಕ್ಕಟ್ಟು ಉಂಟಾಗಿತ್ತು.
ಲೆಬನಾನ್ ಸಚಿವ ಸಂಪುಟ ಪುನರಚಿಸುವಂತೆ ಫ್ರಾನ್ಸ್‌ನ ನಾಯಕರು ಭಾರಿ ಒತ್ತಡ ಹೇರುತ್ತಿದ್ದರು. ಈ ಸಂಬಂಧ ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರನ್ ಕೂಡ ಮಾತುಕತೆ ನಡೆಸಿದ್ದರು.
ದೇಶದ ಎರಡು ಶಿಯಾ ಸಂಘಟನೆಗಳಾದ ಹಿಜ್ಬುಲ್ಲಾ ಮತ್ತು ಅಮಲ್ ಸಂಟನೆಗಳು ಹಣಕಾಸು ಸಚಿವಾಲಯದ ಸಭೆಗಳನ್ನು ತಡೆದ ಬಳಿಕ ಫ್ರಾನ್ಸ್ ಬೆಂಬಲಿತ ಅದಿಬ್ ಸರ್ಕಾರದಲ್ಲಿ ಬಹುಮುಖ್ಯ ಪಾತ್ರವಹಿಸಿದ್ದಾರೆ. ಆದರೆ ಸರ್ಕಾರ ರಚಿಸುವ ಸಂಬಂಧ ಅದಿಬ್ ತಮ್ಮನ್ನು ಭೇಟಿ ಮಾಡಿಲ್ಲ ಎಂದು ಶಿಯಾ ಸಂಘಟನೆಗಳು ದೂರಿವೆ. ಸದ್ಯ ಈ ಎಲ್ಲಾ ಗೊಂದಲಗಳಿಂದ ಬೇಸತ್ತಿದ್ದ ಪ್ರಧಾನಿ ಮುಸ್ತಫಾ ಆದಿಬ್, ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.