ಇಸ್ಲಾಮಾಬಾದ್: ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಉಪಾಧ್ಯಕ್ಷೆ ಮರಿಯಮ್ ನವಾಜ್ ಅವರು ಸಲ್ಲಿಸಿದ ಅರ್ಜಿಯನ್ನು ಲಾಹೋರ್ ಹೈಕೋರ್ಟ್ ವಿಚಾರಣೆ ನಡೆಸಲಿದೆ. ಅವರ ಹೆಸರನ್ನು ನಿರ್ಗಮನ ನಿಯಂತ್ರಣ ಪಟ್ಟಿಯಿಂದ (ಇಸಿಎಲ್) ತೆಗೆದುಹಾಕಬೇಕೆಂದು ಕೋರಿದ್ದ ಅರ್ಜಿ ವಿಚಾರಣೆ ಇದೇ ಜನವರಿ 15 ರಂದು ನಡೆಯಲಿದೆ.
ನ್ಯಾಯಮೂರ್ತಿ ಮುಹಮ್ಮದ್ ತಾರಿಕ್ ಅಬ್ಬಾಸಿ ಮತ್ತು ಚೌಧರಿ ಮುಷ್ತಾಕ್ ಅಹ್ಮದ್ ಅವರನ್ನೊಳಗೊಂಡ ಎರಡು ನ್ಯಾಯಮೂರ್ತಿಗಳ ಪೀಠವು ಜನವರಿ 15 ರಂದು ಅರ್ಜಿಯನ್ನು ಸ್ವೀಕರಿಸಲಿದೆ.
ಕಳೆದ ವರ್ಷ ಡಿಸೆಂಬರ್ 21 ರಂದು ಸಲ್ಲಿಸಿದ್ದ ಅರ್ಜಿಯಲ್ಲಿ ಮರಿಯಮ್ ಅವರ ಹೆಸರನ್ನು ನೊ-ಫ್ಲೈ ಪಟ್ಟಿಯಿಂದ ತೆಗೆದುಹಾಕುವುದರ ಜೊತೆಗೆ ವಿದೇಶ ಪ್ರವಾಸಕ್ಕೆ ಒಂದು ಬಾರಿ ಅನುಮತಿ ಕೋರಿಲಾಗಿದೆ.
ಪ್ರಸ್ತುತ ಲಂಡನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಪುತ್ರಿ ಮರಿಯಮ್ ಅವರು ಡಿಸೆಂಬರ್ 7 ರಂದು ಈ ಕೋರಿಕೆಯೊಂದಿಗೆ ಮೊದಲು ನ್ಯಾಯಾಲಯವನ್ನು ಸಂಪರ್ಕಿಸಿದ್ದರು. ಎರಡು ದಿನಗಳ ನಂತರ ಅರ್ಜಿಯನ್ನು ವಿಲೇವಾರಿ ಮಾಡಲಾಯಿತು.
ಮರಿಯಮ್ ಮತ್ತು ಅವಳ ತಂದೆಯನ್ನು ಆಗಸ್ಟ್ 20, 2018 ರಂದು ಇಸಿಎಲ್ ಲಿಸ್ಟ್ ನಲ್ಲಿ ಇರಿಸಲಾಯಿತು. ಚೌಧರಿ ಶುಗರ್ ಮಿಲ್ಸ್ ಪ್ರಕರಣದಲ್ಲಿ ಮರಿಯಮ್ ಪ್ರಸ್ತುತ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಮತ್ತೊಂದೆಡೆ, ಅನಾರೋಗ್ಯದ ಹಿನ್ನೆಲೆಯಲ್ಲಿ ನವಾಜ್ ಷರೀಫ್ ಕಳೆದ ವರ್ಷ ನವೆಂಬರ್ನಲ್ಲಿ ಲಂಡನ್ಗೆ ಪ್ರಯಾಣ ಬೆಳೆಸಿದ್ದಾರೆ.