ರೋಮ್: ಚೀನಾದಲ್ಲಿ ಕೊರೊನಾ ವೈರಸ್ ಹುಟ್ಟಿಕೊಂಡ ಎರಡು ತಿಂಗಳ ಬಳಿಕ, ಅಂದರೆ ಫೆ.21 ರಂದು ಉತ್ತರ ಇಟಲಿಯ ಪ್ರದೇಶದಲ್ಲಿ ಮೊದಲ ಪ್ರಕರಣ ಪತ್ತೆಯಾಗಿತ್ತು. ಆದರೆ ಕೇವಲ ಒಂದು ತಿಂಗಳಲ್ಲಿ ಇಟಲಿಯಲ್ಲಿ ಕೊವಿಡ್-19ಗೆ ಆರು ಸಾವಿರ ಮಂದಿ ಬಲಿಯಾಗಿದ್ದಾರೆ.
ಇಟಲಿಯಲ್ಲಿ 24 ಗಂಟೆಗಳಲ್ಲಿ 4,789 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಈವರೆಗೆ ಒಟ್ಟು 63,927 ಕೊರೊನಾ ವೈರಸ್ ಪ್ರಕರಣಗಳು ವರದಿಯಾಗಿದೆ. ಸೋಮವಾರ ಒಂದೇ ದಿನ 601 ಮಂದಿ ಸಾವನ್ನಪ್ಪಿದ್ದು, ಮೃತರ ಸಂಖ್ಯೆ 6,077ಕ್ಕೆ ಏರಿಕೆಯಾಗಿದೆ ಎಂದು ಕೊವಿಡ್-19 ತುರ್ತುಸ್ಥಿತಿಯನ್ನು ನಿರ್ವಹಿಸುತ್ತಿರುವ ನಾಗರಿಕ ಸಂರಕ್ಷಣಾ ಇಲಾಖೆ ಮಾಹಿತಿ ನೀಡಿದೆ.
ಕೊವಿಡ್-19 ವಿರುದ್ಧ ಹೋರಾಡಲು ರಷ್ಯಾ, ಫ್ರಾನ್ಸ್, ಮತ್ತು ಜರ್ಮನಿ, ಕ್ಯೂಬಾ ಮತ್ತು ವೆನೆಜುವೆಲಾ ರಾಷ್ಟ್ರಗಳು ಇಟಲಿಯ ಸಹಾಯಕ್ಕೆ ಬಂದಿದ್ದು, ವೈದ್ಯಕೀಯ ಸಾಮಗ್ರಿಗಳು ಮತ್ತು ನುರಿತ ತಜ್ಞರನ್ನು ಇಟಲಿಗೆ ಕಳುಹಿಸಿವೆ.ಈ ದೇಶಗಳಿಗೆ ಇಟಲಿ ಗೃಹ ಸಚಿವಾಲಯ ಕೃತಜ್ಞತೆಯನ್ನು ಸಲ್ಲಿಸಿದೆ.