ಇಸ್ಲಾಮಾಬಾದ್: ಭಾರತದ ರಾಜತಾಂತ್ರಿಕ ಅಧಿಕಾರಿಗಳ ಒತ್ತಡಕ್ಕೆ ಮಣಿದ ಇಸ್ಲಾಮಾಬಾದ್ ಕೋರ್ಟ್ (ಐಎಚ್‌ಸಿ), ಪಾಕಿಸ್ತಾನದಲ್ಲಿ ಮರಣ ದಂಡನೆ ಶಿಕ್ಷೆ ಎದುರಿಸುತ್ತಿರುವ ಭಾರತೀಯ ಕುಲಭೂಷಣ್ ಜಾಧವ್ ಅವರ ವಿಚಾರಣೆಗೆ ವಿಸ್ತೃತ ನ್ಯಾಯಪೀಠ ರಚಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಮುಖ್ಯ ನ್ಯಾ.ಅಥರ್ ಮಿನಾಲಾ, ನ್ಯಾ. ಅಮೀರ್ ಫಾರೂಕ್ ಮತ್ತು ನ್ಯಾ.ಮಿಯಾನ್ ಗುಲ್ ಹಸನ್ ಔರಂಗಜೇಬ್ ಅವರನ್ನೊಳಗೊಂಡ ನ್ಯಾಯಪೀಠವನ್ನು ಶುಕ್ರವಾರ ರಚಿಸಲಾಗಿದ್ದು, ಸೆಪ್ಟೆಂಬರ್ 3 ರಂದು ಪ್ರಕರಣದ ವಿಚಾರಣೆ ನಡೆಯಲಿದೆ. ಜಾಧವ್‌ಗೆ ಕಾನ್ಸುಲರ್ ಪ್ರವೇಶಕ್ಕೆ ಅವಕಾಶ ನೀಡುವಂತೆ ಭಾರತ ಪಾಕಿಸ್ತಾನದ ಮೇಲೆ ಒತ್ತಡ ಹೇರುತ್ತಿದ್ದು, ನಂತರ ಈ ನಿರ್ಧಾರ ಹೊರಬಿದ್ದಿದೆ.
ಕುಲಭೂಷಣ್ ಜಾಧವ್ ಅವರಿಗೆ ಕಾನೂನು ಪ್ರತಿನಿಧಿಯನ್ನು ನೇಮಿಸುವ ವಿಷಯದಲ್ಲಿ ಇಮ್ರಾನ್ ಖಾನ್ ಸರ್ಕಾರ ಭಾರತ ಸರ್ಕಾರವನ್ನು ಸಂಪರ್ಕಿಸುವುದಾಗಿ ಹೇಳಿಕೊಂಡಿದೆ. ಭಾರತೀಯ ಅಧಿಕಾರಿಗಳಿಗೆ ತಮ್ಮ ನಿಲುವನ್ನು ಮಂಡಿಸಲು ಅವಕಾಶ ನೀಡಬೇಕು ಎಂದು ಇಸ್ಲಾಮಾಬಾದ್ ನ್ಯಾಯಾಲಯ ಹೇಳಿದೆ ಎಂದು ಪಾಕಿಸ್ತಾನ ಮಾಧ್ಯಮಗಳು ಈ ಹಿಂದೆ ವರದಿ ಮಾಡಿದ್ದವು. ಆದರೆ, ಅಂತಹ ಯಾವುದೇ ಸಂವಹನವನ್ನು ಭಾರತದ ವಿದೇಶಾಂಗ ಸಚಿವಾಲಯ ಸ್ವೀಕರಿಸಿಲ್ಲ. ಈ ನಿಟ್ಟಿನಲ್ಲಿ ಪಾಕಿಸ್ತಾನ ಸರ್ಕಾರದಿಂದ ನಮಗೆ ಯಾವುದೇ ಮಾಹಿತಿ ಬಂದಿಲ್ಲ ಎಂದು ಎಂಇಎ ವಕ್ತಾರ ಅನುರಾಗ್ ಶ್ರೀವಾಸ್ತವ ಹೇಳಿದ್ದಾರೆ.
ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಪಾಕಿಸ್ತಾನವು ಲಭ್ಯವಿರುವ ಪರಿಣಾಮಕಾರಿ ಪರಿಹಾರಕ್ಕಾಗಿ ಎಲ್ಲಾ ಮಾರ್ಗಗಳನ್ನು ನಿರ್ಬಂಧಿಸಿದೆ ಎಂದು ಕಳೆದ ತಿಂಗಳು ಭಾರತ ಆರೋಪಿಸಿತ್ತು. ಗೂಢಚರ್ಯೆ ಆರೋಪದ ಮೇಲೆ ಜಾಧವ್ ಅವರನ್ನು ಬಲೂಚಿಸ್ತಾನದಿಂದ 2016ರಲ್ಲಿ ಪಾಕ್ ಸೇನೆ ಬಂಧಿಸಿದೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ. ಪಾಕಿಸ್ತಾನದ ಆರೋಪಗಳನ್ನು ಭಾರತ ತಿರಸ್ಕರಿಸಿದೆ ಮತ್ತು ಜಾಧವ್ ಅವರನ್ನು ಇರಾನಿನ ಬಂದರು ಚಬಹಾರ್‌ನಿಂದ ಅಪಹರಿಸಲಾಗಿದೆ ಎಂದು ಹೇಳಿದೆ.
2017ರ ಆರಂಭದಲ್ಲಿ, ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯವು ಜಾಧವ್ ಅವರಿಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಕಳೆದ ವರ್ಷ ಜುಲೈನಲ್ಲಿ, ಪಾಕಿಸ್ತಾನವು ಕಾನ್ಸುಲರ್ ಸಂಬಂಧಗಳ ವಿಯೆನ್ನಾ ಸಮಾವೇಶವನ್ನು ಹಲವಾರು ನಿಯಮಗಳನ್ನು ಉಲ್ಲಂಘಿಸಿದೆ ಎಂಬ ಭಾರತದ ಹೇಳಿಕೆಯನ್ನು ಅಂತಾರಾಷ್ಟ್ರೀಯ ನ್ಯಾಯಾಲಯವು ಎತ್ತಿಹಿಡಿದಿದೆ.