ತೆಹ್ರಾನ್: ಕಮಾಂಡರ್ ಕಾಸಿಮ್ ಸುಲೇಮಾನಿ ಹತ್ಯೆಗೈದ ಅಮೆರಿಕದ ಶಂಕಿತ ಹಂತಕರ ಪಟ್ಟಿಯನ್ನು ಈಗಾಗಲೇ ಇರಾನ್ ಬಿಡುಗಡೆ ಮಾಡಿದ್ದು, ಮತ್ತೆ ಮೂವರು ಶಂಕಿತರನ್ನು ಈ ಪಟ್ಟಿಗೆ ಸೇರಿಸಿದೆ.
2020ರ ಜನವರಿ 3ರಂದು ಬಾಗ್ದಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕದ ಪಡೆಗಳು ನಡೆಸಿದ ವೈಮಾನಿಕ ದಾಳಿಯಲ್ಲಿ ಇರಾಕ್ ಹಾಗೂ ಇರಾನ್ನ ಹಶೆದ್ ಅಲ್-ಶಾಬಿ ಮಿಲಿಟರಿ ಪಡೆಯ ಮೇಜರ್ ಜನರಲ್ ಕಾಸಿಮ್ ಸುಲೇಮಾನಿ ಹತ್ಯೆಯಾಗಿದ್ದರು. ಘಟನೆಯಲ್ಲಿ ಇರಾಕಿ ಮಿಲಿಟರಿ ಪಡೆಯ (ಪಾಪ್ಯುಲರ್ ಮೊಬಿಲೈಸೇಶನ್ ಪಡೆ) ಕಮಾಂಡರ್ ಅಬು ಮಹ್ದಿ ಅಲ್-ಮುಹಂಡಿಸ್ ಕೂಡ ಬಲಿಯಾಗಿದ್ದರು.
ಘಟನೆ ಬಳಿಕ ಇರಾನ್ ಹಾಗೂ ಅಮೆರಿಕ ನಡುವೆ ದ್ವೇಷದ ಜ್ವಾಲಾಮುಖಿ ಎದ್ದಿತ್ತು. ಜೂನ್ 29ರಂದು ಟೆಹ್ರಾನ್ ಪ್ರಾಸಿಕ್ಯೂಟರ್ ಜನರಲ್ ಅಲಿ ಕಾಸಿ ಮೆಹರ್ ಅವರು ಹತ್ಯೆಯಲ್ಲಿ ಭಾಗಿಯಾಗಿರುವ ಹಲವಾರು ಯುಎಸ್ ರಾಜಕೀಯ ಮತ್ತು ಮಿಲಿಟರಿ ಅಧಿಕಾರಿಗಳನ್ನು ಬಂಧಿಸಲು ಪ್ರಕರಣ ದಾಖಲಿಸಲಾಗಿದೆ ಎಂದು ಘೋಷಿಸಿದ್ದರು.
ಇದನ್ನೂ ಓದಿ: ಅಂಚೆ ಚೀಟಿಯಲ್ಲಿ ಭೂಗತ ಪಾತಕಿ ಛೋಟಾ ರಾಜನ್, ಮುನ್ನಾ ಬಜರಂಗಿ ಫೋಟೋ!
ಪ್ರತೀಕಾರ ತೀರಿಸಿಕೊಳ್ಳುವುದಾಗಿ ಹೇಳಿದ್ದ ಇರಾನ್, ಹಂತಕರನ್ನು ಬಂಧಿಸಲು ಆರು ದೇಶಗಳಲ್ಲಿ ವಾರಂಟ್ ಹೊರಡಿಸಿದೆ. ಈ ಹಿಂದೆ ಬಿಡುಗಡೆ ಮಾಡಿದ್ದ ಶಂಕಿತ ಹಂತಕರ ಪಟ್ಟಿಯಲ್ಲಿ 45 ಅಮೆರಿಕನ್ನರು ಇದ್ದರು. ಇದೀಗ ಈ ಸಂಖ್ಯೆ 48ಕ್ಕೆ ಏರಿಕೆಯಾಗಿದೆ ಎಂದು ಇರಾನ್ ಅಧಿಕಾರಿಗಳು ತಿಳಿಸಿದ್ದಾರೆ.