ಜಕಾರ್ತಾ: ಪೂರ್ವ ಇಂಡೋನೇಷ್ಯಾದಲ್ಲಿ ಧಾರಾಕಾರ ಮಳೆಯಿಂದ ಉಂಟಾದ ಭೂ ಕುಸಿತದಿಂದ ಸುಮಾರು 55 ಮಂದಿ ಸಾವನ್ನಪ್ಪಿದ್ದು, 40ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎಂದು ದೇಶದ ವಿಪತ್ತು ಪರಿಹಾರ ಸಂಸ್ಥೆ ತಿಳಿಸಿದೆ.
ಪೂರ್ವ ನುಸಾ ತೆಂಗಾರ ಪ್ರಾಂತ್ಯದ ಅಡೋನಾರಾ ದ್ವೀಪಕ್ಕೆ, ಲ್ಯಾಮೆನೆಲೆ ಗ್ರಾಮದ ಸುತ್ತಮುತ್ತಲಿನ ಬೆಟ್ಟಗಳಿಂದ ಮಣ್ಣು ಕುಸಿದು ಬಿದ್ದಿದೆ. ಘಟನೆಯಲ್ಲಿ 38 ಮಂದಿ ಪ್ರಾಣ ಕಳೆದುಕೊಂಡಿದ್ದು, ಅವಶೇಷಗಳನ್ನು ಸಿಬ್ಬಂದಿ ಹೊರತೆಗೆದಿದ್ದಾರೆ. 5 ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ವಿಪತ್ತು ಏಜೆನ್ಸಿಯ ಮುಖ್ಯಸ್ಥ ಲೆನ್ನಿ ಓಲಾ ಹೇಳಿದ್ದಾರೆ.
ಒಯಾಂಗ್ ಬಯಾಂಗ್ ಗ್ರಾಮದಲ್ಲಿ ಪ್ರವಾಹದಲ್ಲಿ ಕೊಚ್ಚಿ ಹೋದ ಮೂವರ ಮೃತದೇಹವನ್ನು ಸಿಬ್ಬಂದಿ ವಶಪಡಿಸಿಕೊಂಡಿದ್ದು, ಸುಮಾರು 40 ಮನೆಗಳು ಸಹ ನಾಶವಾಗಿವೆ ಎಂದು ಓಲಾ ತಿಳಿಸಿದ್ದಾರೆ.
ಇದನ್ನೂ ಓದಿ: ಇಂಡೋನೇಷ್ಯಾದಲ್ಲಿ ಮತ್ತೆ ಭೂಕಂಪನ: 5.9ರಷ್ಟು ತೀವ್ರತೆ ದಾಖಲು
ವೈಬುರಾಕ್ ಎಂಬ ಮತ್ತೊಂದು ಹಳ್ಳಿಯಲ್ಲಿ, ರಾತ್ರಿ ಸುರಿದ ಭಾರಿ ಮಳೆಯಿಂದ ಮೂವರು ಸಾವನ್ನಪ್ಪಿದ್ದು, ಏಳು ಮಂದಿ ನಾಪತ್ತೆಯಾಗಿದ್ದಾರೆ. ನದಿಗಳ ಅಣೆಕಟ್ಟು ಒಡೆದು ಪೂರ್ವ ಫ್ಲೋರ್ಸ್ ಜಿಲ್ಲೆಗೆ ನೀರು ನುಗ್ಗಿದೆ. ಘಟನೆಯಲ್ಲಿ ಗಾಯಗೊಂಡ ನಾಲ್ವರು ಸ್ಥಳೀಯ ಆರೋಗ್ಯ ಚಿಕಿತ್ಸಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ಇಲಿ ಲೆವೊಟೊಲೊಕ್ ಜ್ವಾಲಾಮುಖಿಯ ಇಳಿಜಾರು ಪ್ರದೇಶದಲ್ಲಿ ಭೂ ಕುಸಿತ ಉಂಟಾಗಿ, ಹಲವಾರು ಗ್ರಾಮಗಳಿಗೆ ಹಾನಿ ಉಂಟು ಮಾಡಿದೆ. ಘಟನೆಯಲ್ಲಿ ಇಂದು ಬೆಳಗ್ಗೆ ವೇಳೆ ಅನೇಕರು ಸಾವನ್ನಪ್ಪಿದ್ದು, ಒಟ್ಟು ಮೃತರ ಸಂಖ್ಯೆ 55ಕ್ಕೆ ಏರಿಕೆಯಾಗಿದೆ.
ಲೆಂಬಾಟಾ ದ್ವೀಪದಲ್ಲಿ ಸಂಭವಿಸಿದ ಈ ದುರಂತದಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ. 16 ಮಂದಿ ಮಣ್ಣಿನಡಿ ಸಿಲುಕಿರುವ ಶಂಕೆಯಿದ್ದು, ರಕ್ಷಣಾ ಕಾರ್ಯ ಮುಂದುವರೆದಿದೆ.
ಸುಮಾರು 10,000 ಜನರನ್ನು ಸ್ಥಳಾಂತರಿಸಲಾಗಿದೆ. ಕಾಲೋಚಿತ ಮಳೆಯು ಇಂಡೋನೇಷ್ಯಾದಲ್ಲಿ ಆಗಾಗ್ಗೆ ಪ್ರವಾಹ ಮತ್ತು ಭೂಕುಸಿತಕ್ಕೆ ಕಾರಣವಾಗುತ್ತದೆ. ಇದು 17,000 ದ್ವೀಪಗಳ ಸಮೂಹವಾಗಿದೆ. ಅಲ್ಲಿ ಲಕ್ಷಾಂತರ ಜನರು ಪರ್ವತ ಪ್ರದೇಶಗಳಲ್ಲಿ ಅಥವಾ ಫಲವತ್ತಾದ ಪ್ರವಾಹ ಬಯಲುಗಳ ಬಳಿ ವಾಸಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಲ್ಲಿ ಸಂಭವಿಸುವ ಅನಾಹುತಕ್ಕೆ ಜನರು ಬೇಗ ಬಲಿಯಾಗುತ್ತಾರೆ ಎನ್ನಬಹುದು.