ನವದೆಹಲಿ / ನಾಯ್‌ಪಿಡಾವ್: ಮ್ಯಾನ್ಮಾರ್‌ನಲ್ಲಿ ಉಂಟಾಗಿರುವ ಹಠಾತ್ ಮಿಲಿಟರಿ ದಂಗೆಯ ಬಗ್ಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ. ದೇಶದ ಆಡಳಿತವನ್ನು ತೆಕ್ಕೆಗೆ ಪಡೆದಿರುವ ಮಿಲಿಟರಿ ಒಂದು ವರ್ಷದ ತುರ್ತುಪರಿಸ್ಥಿತಿ ಘೋಷಿಸಿರುವ ಬೆಳವಣಿಗೆಗಳ ಬಗ್ಗೆ ಭಾರತ ಆತಂಕ ವ್ಯಕ್ತಪಡಿಸಿದ್ದು, ಕಾನೂನು ಹಾಗೂ ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಎತ್ತಿ ಹಿಡಿಯುವಂತೆ ಒತ್ತಾಯಿಸಿದೆ.
ಈ ಕುರಿತು ನವದೆಹಲಿಯ ವಿದೇಶಾಂಗ ಸಚಿವಾಲಯ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಸರ್ಕಾರ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಮ್ಯಾನ್ಮಾರ್‌ನಲ್ಲಿ ಪ್ರಜಾಪ್ರಭುತ್ವ ಪರಿವರ್ತನೆಯ ಪ್ರಕ್ರಿಯೆಗೆ ಭಾರತ ಯಾವಾಗಲೂ ಬೆಂಬಲವನ್ನು ನೀಡುತ್ತದೆ ಎಂದು ಹೇಳಿದೆ.
ರಾಜ್ಯ ಕೌನ್ಸಿಲರ್ ಆಂಗ್ ಸಾನ್ ಸೂಕಿ ಅವರ ಆಡಳಿತಾರೂಢ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ (ಎನ್‌ಎಲ್‌ಡಿ) ಪಕ್ಷವು ನವೆಂಬರ್ 8, 2020 ರಂದು ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ನಿಚ್ಚಳ ಗೆಲುವು ಸಾಧಿಸಿದ ಕೇವಲ ಎರಡು ತಿಂಗಳ ನಂತರ ಸೋಮವಾರದ ಮಿಲಿಟರಿ ದಂಗೆ ಸಂಭವಿಸಿದೆ.
ಆಂಗ್ ಸಾನ್ ಸೂಕಿ ಅವರ ಎನ್‌ಎಲ್‌ಡಿ ಪಾರ್ಟಿ ಚುನಾವಣೆಗಳಲ್ಲಿ 322ಕ್ಕೂ ಹೆಚ್ಚು ಸ್ಥಾನ ಪಡೆದು ಬಹುಮತ ಪಡೆದಿತ್ತು. ಆದರೆ ಮ್ಯಾನ್ಮಾರ್‌ನ ಮಿಲಿಟರಿ ಬೆಂಬಲಿತ ಪ್ರತಿಪಕ್ಷ ಯೂನಿಯನ್ ಸಾಲಿಡಾರಿಟಿ ಅಂಡ್ ಡೆವಲಪ್‌ಮೆಂಟ್ ಪಾರ್ಟಿ (ಯುಎಸ್‌ಡಿಪಿ) ಈ ಚುನಾವಣಾ ಫಲಿತಾಂಶಗಳನ್ನು ನಿರಾಕರಿಸಿತ್ತು.
2011ರಲ್ಲಿ ದೇಶದಲ್ಲಿ ಮಿಲಿಟರಿ ಆಡಳಿತ ಕೊನೆಗೊಂಡ ನಂತರ ಇದು ಎರಡನೇ ಸಾರ್ವತ್ರಿಕ ಚುನಾವಣೆಯಾಗಿದೆ. ಚುನಾವಣೆಗಳಲ್ಲಿ ವಂಚನೆ ನಡೆದಿದ್ದು ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ತಾನೇ ಮುಂದಾಗಿ ಕ್ರಮ ಕೈಗೊಳ್ಳುವುದಾಗಿ ಮಿಲಿಟರಿ ಎಚ್ಚರಿಕೆ ನೀಡಿತ್ತು. ಅಲ್ಲದೇ ಸಂಭವನೀಯ ಮಿಲಿಟರಿ ಬಂಡಾಯ ನಡೆಸುವುದಾಗಿ ಕೂಡ ಹೇಳಿತ್ತು.
ಓದಿ : ಮ್ಯಾನ್ಮಾರ್‌ನಲ್ಲಿ ಮಿಲಿಟರಿ ಕ್ರಾಂತಿ: ಸೂಕಿ ಸೇರಿ ಹಲವರು ವಶಕ್ಕೆ, ತುರ್ತುಪರಿಸ್ಥಿತಿ ಘೋಷಿಸಿದ ಸೇನೆ
ಇದರ ಬೆನ್ನಲ್ಲೇ ಸೋಮವಾರ ಬೆಳಗ್ಗೆ ಮಿಲಿಟರಿ ಪಡೆಗಳು ಸೂಕಿ, ಎನ್‌ಎಲ್‌ಡಿ ಪಕ್ಷದ ಅಧ್ಯಕ್ಷ ಯು ವಿನ್ ಮಿಂಟ್ ಹಾಗೂ ಇತರ ಹಿರಿಯ ಅಧಿಕಾರಿಗಳನ್ನು ಬಂಧಿಸಿದ್ದು, ದೇಶದ ಆಡಳಿತದ ಚುಕ್ಕಾಣಿಯನ್ನು ಕೈಗೆ ತೆಗೆದುಕೊಂಡಿದೆ.
ದೇಶದ ಆಂತರಿಕ ವ್ಯವಹಾರಗಳಲ್ಲಿ ಚೀನಾದ ಹಿಡಿತ ಹೆಚ್ಚಾಗುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ಹಲವಅರು ಬಅರಿ ವರದಿಯಾಗಿತ್ತು. 1990 ಮತ್ತು 2000ರ ದಶಕಗಳಲ್ಲಿ ದೇಶವನ್ನು ಆಳಿದ ಮ್ಯಾನ್ಮಾರ್‌ನ ಮಿಲಿಟರಿ ಜುಂಟಾಗೆ ಚೀನಾ ಕಮ್ಯುನಿಸ್ಟ್ ಪಕ್ಷದ (ಸಿಸಿಪಿ) ಸಂಪೂರ್ಣ ಬೆಂಬಲವಿರುವುದನ್ನು ಇಲ್ಲಿ ಗಮನಿಸಬಹುದು.
ಸುಮಾರು ಎರಡು ದಶಕಗಳಿಂದ ಇದ್ದ ಮಿಲಿಟರಿ ಆಡಳಿತದ ವಿರುದ್ಧ ಸುದೀರ್ಘ ಹೋರಾಟದ ನಂತರ, ಸೂಕಿ ಕಳೆದ ಐದು ವರ್ಷಗಳಲ್ಲಿ ಮ್ಯಾನ್ಮಾರ್‌ನಲ್ಲಿ ಭಾಗಶಃ ಪ್ರಜಾಪ್ರಭುತ್ವವನ್ನು ಜಾರಿಗೆ ತರಲು ಯಶಸ್ವಿಯಾಗಿದ್ದರು.
ಮ್ಯಾನ್ಮಾರ್‌ನಲ್ಲಿ ಎಲ್ಲಾ ಬ್ಯಾಂಕ್ಗಳು ಬಂದ್ : ಮಿಲಿಟರಿ ದಂಗೆಯ ಪರಿಣಾಮ ಮ್ಯಾನ್ಮಾರ್‌ನ ಎಲ್ಲಾ ಬ್ಯಾಂಕ್ಗಳನ್ನು ಬಂದ್ ಮಾಡಲಾಗಿದೆ. ಈ ದಂಗೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಮ್ಯಾನ್ಮಾರ್ ಬ್ಯಾಂಕ್ಗಳ ಸಂಘ, ದೇಶದಲ್ಲಿ ಎಲ್ಲಾ ಬ್ಯಾಂಕ್ಗಳನ್ನು ಮುಚ್ಚುವಂತೆ ಆದೇಶಿಸಿದೆ.