ಬೀಜಿಂಗ್: 2027ರ ಮುಂಚೆಯೇ ಭಾರತವು ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಲಿದೆ ಎಂದು ಚೀನಾದ ಜನಸಂಖ್ಯಾಶಾಸ್ತ್ರಜ್ಞರು ಅಂದಾಜಿಸಿದ್ದು, ಕಳೆದ ಕೆಲವು ವರ್ಷಗಳಲ್ಲಿ ಜನನ ದರದಲ್ಲಿ ಚೀನಾದ ಸ್ಥಿರವಾದ ಕುಸಿತ ದಾಖಲಾಗಿದ್ದರಿಂದ ಈ ಬದಲಾವಣೆ ಕಂಡುಬರಲಿದೆ ಎಂದಿದ್ದಾರೆ.
2019ರಿಂದ 2050ರ ಅವಧಿಯಲ್ಲಿ ಭಾರತದ ಜನಸಂಖ್ಯೆಗೆ ಹೆಚ್ಚುವರಿಯಾಗಿ 27 ಕೋಟಿ ಜನಸಂಖ್ಯೆ ಸೇರ್ಪಡೆಯಾಗಲಿದೆ ಎಂದು ವಿಶ್ವಸಂಸ್ಥೆ 2019ರಂದು ಬಿಡುಗಡೆ ಮಾಡಿದ ವರದಿಯಲ್ಲಿ ಹೇಳಿತ್ತು. 2027ರ ವೇಳೆಗೆ ಭಾರತವು ಚೀನಾವನ್ನು ಹಿಂದಕ್ಕೆ ತಳ್ಳಿ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿಲಿದೆ. ಈ ಶತಮಾನದ ಅಂತ್ಯದ ವೇಳೆಗೆ ಭಾರತ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿ ಉಳಿಯಲಿದೆ ಎಂದು ವರದಿ ತಿಳಿಸಿದೆ.
ವಿಶ್ವಸಂಸ್ಥೆಯ ಅಂಕಿಅಂಶಗಳ ಪ್ರಕಾರ, 2019ರಲ್ಲಿ ಭಾರತವು 1.37 ಬಿಲಿಯನ್ ಮತ್ತು ಚೀನಾ 1.43 ಬಿಲಿಯನ್ ಜನಸಂಖ್ಯೆ ಹೊಂದಿತ್ತು.
ಚೀನಾ ಮಂಗಳವಾರ ಬಿಡುಗಡೆ ಮಾಡಿದ ಒಂದು ದಶಕದ ಜನಗಣತಿಯಲ್ಲಿ ಚೀನಾದ ಜನಸಂಖ್ಯೆಯು 1.41178 ಶತಕೋಟಿ ತಲುಪಿದ್ದು, ನಿಧಾನಗತಿಯಲ್ಲಿ ಬೆಳೆದಿದೆ. ಮುಂದಿನ ವರ್ಷದಿಂದ ಈ ಸಂಖ್ಯೆಗಳು ಇನ್ನಷ್ಟು ಕುಸಿಯಬಹುದು ಎಂಬ ಅಧಿಕೃತ ಲೆಕ್ಕಾಚಾರದ ಮಧ್ಯೆಯೂ ವಿಶ್ವದ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿ ತನ್ನ ಸ್ಥಾನ ಈಗಲೂ ಉಳಿಸಿಕೊಂಡಿದೆ ಎಂದಿದೆ.
ಜನಸಂಖ್ಯೆಯ ಕುಸಿತವು ಕಾರ್ಮಿಕರ ಕೊರತೆ ಮತ್ತು ಬಳಕೆಯ ಮಟ್ಟದಲ್ಲಿ ಕುಸಿತಕ್ಕೆ ಕಾರಣವಾಗಬಹುದು ಎಂದು ನಿರೀಕ್ಷಿಸಲಾಗಿದೆ. ಇದು ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯ ಭವಿಷ್ಯದ ಆರ್ಥಿಕ ದೃಷ್ಟಿಕೋನದ ಮೇಲೆ ಪರಿಣಾಮ ಬೀರುತ್ತದೆ. 2027ಕ್ಕಿಂತ ಮೊದಲು ಭಾರತದ ಜನಸಂಖ್ಯೆಯು ಚೀನಾವನ್ನು ಹಿಂದಿಕ್ಕಬಹುದು ಎಂದು ಚೀನಾದ ಗ್ಲೋಬಲ್ ಟೈಮ್ಸ್ ಜನಸಂಖ್ಯಾಶಾಸ್ತ್ರಜ್ಞರ ಹೇಳಿಕೆ ಉಲ್ಲೇಖಿಸಿ ವರದಿ ಮಾಡಿದೆ.
ಮುಂಬರುವ ವರ್ಷಗಳಲ್ಲಿ ಚೀನಾದ ಜನನ ದರಗಳು ಇಳಿಯುವ ನಿರೀಕ್ಷೆಯಿದೆ. ಜನಸಂಖ್ಯಾಶಾಸ್ತ್ರಜ್ಞರು ಅದರ ಪರಿಣಾಮವಾಗಿ ಭಾರತವು 2023 ಅಥವಾ 2024ರ ವೇಳೆಗೆ ಚೀನಾವನ್ನು ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿ ಹಿಂದಿಕ್ಕುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.