ನವದೆಹಲಿ: ಪೂರ್ವ ಲಡಾಖ್‌ನಲ್ಲಿ ಭಾರತ-ಚೀನಾ ನಡುವಿನ ಗಡಿ ಸಂಘರ್ಷ ಸಂಬಂಧ ನಿನ್ನೆ ನಡೆದ ಸೇನಾ ಮಟ್ಟದ 13ನೇ ಸುತ್ತಿನ ಮಾತುಕತೆ ವಿಫಲವಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಈ ಬಗ್ಗೆ ಮಾಹಿತಿ ನೀಡಿರುವ ಸೇನೆ, ಚೀನಾ ಯೋಧರು ಯಾವುದನ್ನೂ ಒಪ್ಪುತ್ತಿಲ್ಲ ಹಾಗೂ ಮುಂದಿನ ನಿರ್ಧಾರಗಳನ್ನು ಕೈಗೊಳ್ಳುವಂತ ಯಾವುದೇ ಪ್ರಸ್ತಾಪಗಳನ್ನು ಒದಗಿಸುತ್ತಿಲ್ಲ ಎಂದು ಹೇಳಿದೆ. ಸಭೆಯಲ್ಲಿ ಭಾರತದ ನಿಯೋಗವು ಉಳಿದ ಪ್ರದೇಶಗಳ ಸಮಸ್ಯೆ ಪರಿಹರಿಸಲು ರಚನಾತ್ಮಕ ಸಲಹೆಗಳನ್ನು ನೀಡಿತು. ಆದರೆ ಚೀನಾ ಕಡೆಯವರು ಇದನ್ನೂ ಒಪ್ಪಿಕೊಳ್ಳಲಿಲ್ಲ. ಹೀಗಾಗಿ ಸಂಘರ್ಷ ಪೀಡಿತ ಪ್ರದೇಶದ ಬಗ್ಗೆ ಪರಿಹಾರ ಕಂಡುಕೊಳ್ಳುವ ಯಾವುದೇ ಫಲಿಶಾಂತ ಹೊರಬಂದಿಲ್ಲ ಎಂದು ಸೇನೆ ತನ್ನ ಹೇಳಿಕೆಯನ್ನು ಬಿಡುಗಡೆ ಮಾಡಿದೆ.
ಎರಡೂ ಕಡೆಯವರು ಸಂವಹನ ಮುಂದುವರಿಸಲು ಹಾಗೂ ಗಡಿಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಒಪ್ಪಿಗೆ ಸೂಚಿಸಿದ್ದಾರೆ. ಚೀನಾದ ಕಡೆಯವರು ದ್ವಿಪಕ್ಷೀಯ ಸಂಬಂಧಗಳ ಒಟ್ಟಾರೆ ದೃಷ್ಟಿಕೋನವನ್ನು ಗಣನೆಗೆ ತೆಗೆದುಕೊಳ್ಳುತ್ತಾರೆ. ಉಳಿದ ವಿಷಯಗಳ ಪರಿಹಾರಕ್ಕಾಗಿ ಕೆಲಸ ಮಾಡುತ್ತಾರೆ ಎಂಬುದು ನಮ್ಮ ನಿರೀಕ್ಷೆಯಾಗಿದೆ. ದ್ವಿಪಕ್ಷೀಯ ಒಪ್ಪಂದಗಳು ಮತ್ತು ಪ್ರೋಟೋಕಾಲ್‌ಗಳನ್ನು ಪಾಲಿಸುತ್ತಾರೆಂದು ನಿರೀಕ್ಷಿಸಿದ್ದೇವೆ ಎಂದು ಭಾರತೀಯ ಸೇನೆ ವಿಶ್ವಾಸ ವ್ಯಕ್ತಪಡಿಸಿದೆ.
ಮಾತುಕತೆಗಳು ವಿಫಲವಾಗಿರುವುದನ್ನು ಚೀನಾ ಸ್ಪಷ್ಟಪಡಿಸಿದೆ. ಈ ಬಗ್ಗೆ ಮಾಹಿತಿ ನೀಡಿರುವ ಚೀನಾ ಸೇನೆಯ ವೆಸ್ಟರ್ನ್ ಥಿಯೇಟರ್ ಕಮಾಂಡ್, ಸಮಂಜಸವಲ್ಲದ ಹಾಗೂ ಅವಾಸ್ತವಿಕ ಬೇಡಿಕೆಗಳ ಈಡೇರಿಕೆಗೆ ಭಾರತ ಒತ್ತಾಯಿಸುತ್ತದೆ. ಇದು ಮಾತುಕತೆಗೆ ಅಡ್ಡಿಯಾಗಿದೆ. ಗಡಿ ಪರಿಸ್ಥಿತಿಯನ್ನು ತಗ್ಗಿಸಲು ಚೀನಾ ತನ್ನ ಅಪಾರ ಪ್ರಯತ್ನಗಳನ್ನು ಮಾಡಿದೆ. ತನ್ನ ಪ್ರಾಮಾಣಿಕತೆಯನ್ನು ಸಂಪೂರ್ಣವಾಗಿ ಪ್ರದರ್ಶಿಸಿರುವುದಾಗಿ ಹೇಳಿದೆ.
ನಿನ್ನೆ ಸುಮಾರು ಎಂಟೂವರೆ ಗಂಟೆಗಳ ಕಾಲ ನಡೆದ ಚೀನಾ ಜೊತೆಗಿನ 13ನೇ ಸುತ್ತಿನ ಸೇನಾ ಮಟ್ಟದ ಮಾತುಕತೆಯಲ್ಲಿ ಪೂರ್ವ ಲಡಾಖ್‌ನ ಉಳಿದ ಘರ್ಷಣೆ ಸ್ಥಳಗಳಲ್ಲಿ ಸೈನ್ಯವನ್ನು ಶೀಘ್ರವೇ ತೆರವು ಮಾಡುವಂತೆ ಭಾರತ ಒತ್ತಾಯಿಸಿದೆ ಎನ್ನಲಾಗ್ತಿದೆ.
ಇದನ್ನೂ ಓದಿ: ದೀರ್ಘಕಾಲದ ಬಳಿಕ ವ್ಯಾಪಾರ ಸಮಸ್ಯೆಗಳ ಕುರಿತು ಅಮೆರಿಕ - ಚೀನಾ ಸಭೆ