ವೆಲ್ಲಿಂಗ್ಟನ್(ನ್ಯೂಜಿಲೆಂಡ್): ವಿಶ್ವದೆಲ್ಲೆಡೆ ಇದುವರೆಗೂ 70,81,811ಕ್ಕೂ ಹೆಚ್ಚು ಜನರಿಗೆ ಕೊರೊನಾ ಸೋಂಕು ತಗುಲಿದ್ದು, 4,05,074ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಈವರೆಗೆ 34,55,104ಕ್ಕೂ ಹೆಚ್ಚು ಜನ ಚೇತರಿಸಿಕೊಂಡಿದ್ದಾರೆ.
ಇತ್ತ, ನ್ಯೂಜಿಲೆಂಡ್ ಕೊರೊನಾ ಮುಕ್ತ ದೇಶವಾಗಿದೆ. ಸೋಂಕಿಗೆ ಒಳಗಾದ ಅಂತಿಮ ವ್ಯಕ್ತಿ ಚೇತರಿಸಿಕೊಂಡಿದ್ದಾನೆ ಎಂದು ನ್ಯೂಜಿಲೆಂಡ್ನ ಆರೋಗ್ಯ ಅಧಿಕಾರಿಗಳು ವರದಿ ಮಾಡಿದ ಬಳಿಕ ಅಲ್ಲಿ ಕೊರೊನಾ ವೈರಸ್ ನಿರ್ಮೂಲನೆ ಆಗಿದೆ. ಈ ದೇಶದಲ್ಲಿ ಕಳೆದ 17 ದಿನಗಳಿಂದ ಯಾವುದೇ ಹೊಸ ಕೋವಿಡ್-19 ಪ್ರಕರಣ ಪತ್ತೆಯಾಗಿಲ್ಲ.
ಬೇರೆ ದೇಶಗಳಿಂದ ಹೊಸ ಪ್ರಕರಣಗಳು ನ್ಯೂಜಿಲೆಂಡ್ಗೆ ಆಗಮಿಸುವ ಸಾಧ್ಯತೆ ಇದೆ ಎಂದು ಆರೋಗ್ಯ ಅಧಿಕಾರಿಗಳು ಎಚ್ಚರಿಸಿದ್ದಾರೆ. ಹೀಗಾಗಿ ಕೆಲ ವಿನಾಯಿತಿಗಳೊಂದಿಗೆ ನ್ಯೂಜಿಲೆಂಡ್ ತನ್ನ ಗಡಿಗಳನ್ನು ಮುಚ್ಚಿದೆ.
5 ಮಿಲಿಯನ್ ಜನಸಂಖ್ಯೆ ಹೊಂದಿರುವ ರಾಷ್ಟ್ರವು ಕೊರೊನಾ ತೊಡೆದುಹಾಕಲು ಹಲವಾರು ಅಂಶಗಳು ಸಹಾಯ ಮಾಡಿವೆ. ಆರಂಭದ ದಿನಗಳಲ್ಲಿಯೇ ಅಲ್ಲಿನ ಪ್ರಧಾನಿ ಜಸಿಂಡಾ ಅರ್ಡೆರ್ನ್ ಕಟ್ಟುನಿಟ್ಟಾದ ಲಾಕ್ ಡೌನ್ ಹೇರಿದ್ದರು. ಇದರ ಪರಿಣಾಮ ಎಂಬಂತೆ ಇಂದು ನ್ಯೂಜಿಲೆಂಡ್ ಕೊರೊನಾ ಮುಕ್ತವಾಗಿದೆ.