ಉಪಗ್ರಹ ಆಧರಿತ ಭೌಗೋಳಿಕ ಸ್ಥಳಸೂಚಕದ ಮಾಹಿತಿ ಅಥವಾ ಜಿಯೋಸ್ಪೇಷಿಯಲ್ ಡೇಟಾ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದೆ. ಒಂದು ನಿರ್ದಿಷ್ಟ ಭೂಪ್ರದೇಶದಲ್ಲಿ ಸುಸ್ಥಿರ ಅಭಿವೃದ್ಧಿ ಸಾಧಿಸಲು ಭೌಗೋಳಿಕ ಸ್ಥಳಸೂಚಕದ ಮಾಹಿತಿ ತುಂಬಾನೇ ಸಹಕಾರಿಯಾಗಿದೆ. ಆರೋಗ್ಯ, ಶಿಕ್ಷಣ, ಆಹಾರ ಭದ್ರತೆ, ಕೃಷಿ, ವಿಪತ್ತು ಮುನ್ಸೂಚನೆ, ಅಪಾಯದ ಮುನ್ಸೂಚನೆ ಹೀಗೆ ಹಲವಾರು ಕ್ಷೇತ್ರಗಳ ಸಮಸ್ಯೆಗಳ ಪರಿಹಾರ ಇದರಿಂದ ಸಾಧ್ಯವಾಗಲಿದೆ.
ಭೌಗೋಳಿಕ ಮಾಹಿತಿ, ಪ್ರಸ್ತುತ ಲಭ್ಯವಿರುವ ಆ ಸ್ಥಳದ ಅಂಕಿ-ಅಂಶಗಳು, ವಾಸ್ತವಿಕ ಪರಿಸ್ಥಿತಿ ಹಾಗೂ ಹೊಸ ಮಾಹಿತಿಗಳನ್ನು ಸಂಯೋಜಿಸುವ ಮೂಲಕ ಸರ್ಕಾರಗಳು, ಖಾಸಗಿ ಸಂಸ್ಥೆಗಳು, ಸಮುದಾಯ ಮತ್ತು ನಾಗರಿಕರಿಗೆ ಅಗತ್ಯವಿರುವ ಮಾಹಿತಿಯನ್ನು ಸೂಕ್ತ ಸಮಯದಲ್ಲಿ ಒದಗಿಸಲು ಸಾಧ್ಯವಾಗುತ್ತದೆ. ಹೀಗಾಗಿ ಈ ಉಪಗ್ರಹ ಆಧರಿತ ಜಿಯೋಸ್ಪೇಷಿಯಲ್ ಡೇಟಾವನ್ನು ಪರಿಣಾಮಕಾರಿಯಾಗಿ ಹೇಗೆ ಉಪಯೋಗಿಸಬಹುದು ಎಂಬ ಬಗ್ಗೆ ಸಮಗ್ರ ಮಾಹಿತಿಯ ಕೋಶವೊಂದನ್ನು ತಯಾರಿಸಲಾಗಿದೆ.
ಏಶಿಯಾ ಪೆಸಿಫಿಕ್ ದೇಶಗಳಲ್ಲಿ ಸುಸ್ಥಿರ ಅಭಿವೃದ್ಧಿಯ ಸಾಧನೆಗಾಗಿ ಬಾಹ್ಯಾಕಾಶ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಈ ತಂತ್ರಜ್ಞಾನ ಸಹಕಾರಿಯಾಗಲಿದೆ. ವಿಪತ್ತು ನಿರ್ವಹಣೆ, ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆ, ಸಂಪರ್ಕ ಸಾಧನ, ಸಾಮಾಜಿಕ ಅಭಿವೃದ್ಧಿ, ಇಂಧನ ಮತ್ತು ಹವಾಮಾನ ಬದಲಾವಣೆಯ ಕ್ಷೇತ್ರಗಳಲ್ಲಿ ಸುಸ್ಥಿರ ಅಭಿವೃದ್ಧಿಗಾಗಿ ಈ ಜಿಯೋಸ್ಪೇಷಿಯಲ್ ಡೇಟಾ ಉಪಯೋಗಿಸುವ ಕುರಿತಾಗಿ ಮಾಹಿತಿ ಕೋಶದಲ್ಲಿ ವಿವರಿಸಲಾಗಿದೆ.
ಜೂನ್ 2020 ರಲ್ಲಿದ್ದಂತೆ ಆಸ್ಟ್ರೇಲಿಯಾ, ಅಜರ್ಬೈಜಾನ್, ಬಾಂಗ್ಲಾದೇಶ, ಚೀನಾ, ಭಾರತ, ಇಂಡೋನೇಶಿಯಾ, ಇರಾನ್, ಜಪಾನ್, ಮಲೇಶಿಯಾ, ನ್ಯೂಜಿಲೆಂಡ್, ಫಿಲಿಪೀನ್ಸ್, ಕಜಾಕಿಸ್ತಾನ್, ಕೋರಿಯಾ, ರಶಿಯಾ, ಥೈಲ್ಯಾಂಡ್, ತುರ್ಕಮೆನಿಸ್ತಾನ್, ಉಜ್ಬೆಕಿಸ್ತಾನ್ ಮುಂತಾದ ದೇಶಗಳು ತಮ್ಮ ಜಿಯೋಸ್ಪೇಷಿಯಲ್ ಡೇಟಾವನ್ನು ಪರಸ್ಪರ ಹಂಚಿಕೊಳ್ಳಲು ಮುಂದಾಗಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ.