ಕ್ವೆಟ್ಟಾ, ಪಾಕಿಸ್ತಾನ: ಕಲ್ಲಿದ್ದಲು ಗಣಿಯಲ್ಲಿ ಮಿಥೇನ್ ಗ್ಯಾಸ್ ಸ್ಫೋಟಗೊಂಡು ಆರು ಮಂದಿ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಆಫ್ಘನ್ ಗಡಿಯ ನೈರುತ್ಯ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಈ ದುರ್ಘಟನೆ ಸಂಭವಿಸಿದೆ ಎಂದು ಪಾಕಿಸ್ತಾನ ಪ್ರಾಧಿಕಾರಗಳು ಮಾಹಿತಿ ನೀಡಿವೆ.
ಬಲೂಚಿಸ್ತಾನದ ರಾಜಧಾನಿ ಕ್ವೆಟ್ಟಾದ ಪೂರ್ವಕ್ಕೆ 50 ಕಿಲೋ ಮೀಟರ್ ದೂರದಲ್ಲಿರುವ ಮಾರವಾರ್ ಎಂಬಲ್ಲಿರುವ ಗಣಿಯಲ್ಲಿ ಸಂಗ್ರಹಿಸಿಟ್ಟಿದ್ದ ಮಿಥೇನ್ ಗ್ಯಾಸ್ ಸ್ಫೋಟದಿಂದ ಅವಘಡ ಸಂಭವಿಸಿದೆ ಎಂದು ಗಣಿ ಇನ್ಸ್ಪೆಕ್ಟರ್ ನಾಸೀರ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಸಿಎಂ ಮಮತಾ ಬ್ಯಾನರ್ಜಿ ಚೇತರಿಕೆ; ಆಸ್ಪತ್ರೆಯಿಂದ ಬಿಡುಗಡೆ
ಘಟನೆಯಲ್ಲಿ ಇಬ್ಬರು ಕಾರ್ಮಿಕರು ಗಾಯಗೊಂಡಿದ್ದು, ಶೋಧ ಮತ್ತು ರಕ್ಷಣಾ ಕಾರ್ಯಗಳು ಪೂರ್ಣಗೊಂಡಿವೆ. ಆದರೆ ಸ್ಫೋಟಕ್ಕೆ ಕಾರಣ ತಿಳಿಯುವ ಸಲುವಾಗಿ ತನಿಖಾಧಿಕಾರಿಗಳು ಇನ್ನೂ ಸ್ಥಳದಲ್ಲಿಯೇ ಇದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪಾಕಿಸ್ತಾನದ ಹಲವು ಗಣಿಗಳಲ್ಲಿ ಸುರಕ್ಷತಾ ಮಾರ್ಗಸೂಚಿಗಳ ಉಲ್ಲಂಘನೆ ಸಾಮಾನ್ಯವಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ಅವಘಡಗಳು ಹೆಚ್ಚಾಗಿ ಸಂಭವಿಸಲು ಕಾರಣವಾಗಿವೆ.