ಬೀಜಿಂಗ್ (ಚೀನಾ): ನಿರ್ಮಾಣ ಹಂತದ ಬಾಹ್ಯಾಕಾಶ ನಿಲ್ದಾಣದಲ್ಲಿ 6 ಗಂಟೆಗಳ ಬಾಹ್ಯಾಕಾಶ ನಡಿಗೆ ಮುಗಿಸಿದ ಚೀನಾದ ಮೊದಲ ಮಹಿಳೆ ಎಂಬ ಕೀರ್ತಿಗೆ ವಾಂಗ್ ಯಾಪಿಂಗ್ ಭಾಜನರಾಗಿದ್ದಾರೆ.
ಟಿಯಾನ್ಹೆ ಎಂದು ಕರೆಯಲ್ಪಡುವ ಬಾಹ್ಯಾಕಾಶ ನಿಲ್ದಾಣದಲ್ಲಿ ತನ್ನ ಸಹೋದ್ಯೋಗಿ ಝೈ ಝಿಗಾಂಗ್ ಅವರೊಂದಿಗೆ 6 ಗಂಟೆಗಳ ಕಾಲ ಸ್ಪೇಸ್ ವಾಕ್ ಮುಗಿಸಿ ಮಾಡ್ಯೂಲ್ಗೆ ಮರಳಿದ್ದಾರೆ ಎಂದು ಚೀನಾ ಮಾಧ್ಯಮ ವರದಿ ಮಾಡಿದೆ.
ಇದು ಚೀನಾದ ಬಾಹ್ಯಾಕಾಶ ಇತಿಹಾಸದಲ್ಲಿ ಮಹಿಳಾ ಗಗನಯಾತ್ರಿಗಳನ್ನು ಒಳಗೊಂಡ ಮೊದಲ ಬಾಹ್ಯಾಕಾಶ ನಡಿಗೆಯಾಗಿದೆ ಎಂದು ಚೀನಾ ಮಾನವಸಹಿತ ಬಾಹ್ಯಾಕಾಶ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ. ಚೀನಾ ಅ.16 ರಂದು ಶೆಂಝೌ-13 ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡಿತ್ತು. ಮುಂದಿನ ವರ್ಷದ ವೇಳೆಗೆ ಸಿದ್ಧವಾಗುವ ನಿರೀಕ್ಷೆಯಿದ್ದ ನಿರ್ಮಾಣ ಹಂತದಲ್ಲಿರುವ ಬಾಹ್ಯಾಕಾಶ ನಿಲ್ದಾಣಕ್ಕೆ 6 ತಿಂಗಳ ಕಾರ್ಯಾಚರಣೆಯಲ್ಲಿ ಮೂವರು ಗಗನಯಾತ್ರಿಗಳನ್ನು ಕಳುಹಿಸಿತ್ತು.
ಸುಮಾರು 6.5 ಗಂಟೆಗಳಲ್ಲಿ ತಮ್ಮ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಇಬ್ಬರೂ 1:16 AM (ಬೀಜಿಂಗ್ ಸಮಯ)ಕ್ಕೆ ಮಾಡ್ಯೂಲ್ಗೆ ಮರಳಿದರು ಎಂದು ವರದಿಯಾಗಿದೆ. ಬಾಹ್ಯಾಕಾಶ ನಿಲ್ದಾಣದಲ್ಲಿ 6 ತಿಂಗಳ ಅವಧಿಯ ಕಾರ್ಯಾಚರಣೆಗಾಗಿ ಅಕ್ಟೋಬರ್ 16 ರಂದು ಬಾಹ್ಯಾಕಾಶಕ್ಕೆ ನೌಕೆ ಉಡಾಯಿಸಲಾಯಿತು. ಇದು ಚೀನಾದ ಬಾಹ್ಯಾಕಾಶ ಇತಿಹಾಸದಲ್ಲಿ ಅತ್ಯಂತ ದೀರ್ಘವಾದ ಮಾನವಸಹಿತ ಕಾರ್ಯಾಚರಣೆಯಾಗಿದೆ.
ಇದನ್ನೂ ಓದಿ: ಯುವಜನತೆ ನಿಮ್ಮ ಮನದ ಮಾತಿನಂತೆ ನಡೆದುಕೊಳ್ಳಿ, ನಕಲು ಮಾಡಬೇಡಿ: NIT-Kಯಲ್ಲಿ ಇಸ್ರೋ ಅಧ್ಯಕ್ಷ ಶಿವನ್