ತೈಪೆ/ತೈವಾನ್: ದಕ್ಷಿಣ ತೈವಾನ್‌ನಲ್ಲಿ ಕಟ್ಟಡವೊಂದರಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಸಾವನ್ನಪ್ಪಿದವರ ಸಂಖ್ಯೆ 46ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಕನಿಷ್ಠ 41 ಜನರು ಗಾಯಗೊಂಡಿದ್ದಾರೆ.
ಗುರುವಾರ ಮುಂಜಾನೆ 3 ಗಂಟೆ ಸುಮಾರಿಗೆ 13 ಅಂತಸ್ಥಿನ ಕಟ್ಟಡದಲ್ಲಿ ಬೆಂಕಿ ಹೊತ್ತಿಕೊಂಡಿದೆ ಎಂದು ಕಾವೊಹ್ಸಿಯುಂಗ್ ನಗರದ ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.
ಅಗ್ನಿಶಾಮಕ ಇಲಾಖೆಯ ಹೇಳಿಕೆಯು ಬೆಂಕಿಯು "ಅತ್ಯಂತ ಭೀಕರವಾಗಿದೆ" ಮತ್ತು ಅನೇಕ ಮಹಡಿಗಳನ್ನು ನಾಶಪಡಿಸಿದೆ ಎಂದು ಹೇಳಿದೆ. ಕನಿಷ್ಠ 11 ಮೃತದೇಹಗಳನ್ನು ನೇರವಾಗಿ ಶವಾಗಾರಕ್ಕೆ ಕಳುಹಿಸಲಾಗಿದೆ ಎಂದು ಅಗ್ನಿಶಾಮಕ ದಳದ ಮುಖ್ಯಸ್ಥ ಲಿ ಚಿಂಗ್-ಹ್ಸಿಯು ತಿಳಿಸಿದ್ದಾರೆ.
ಭಾರಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆ ಬೆಂಕಿ ನಂದಿಸಲು ಅಗ್ನಿಶಾಮಕ ದಳದವರು ಹರಸಾಹಸ ಪಟ್ಟಿದ್ದಾರೆ. ಬೆಂಕಿ ಹೊತ್ತಿಕೊಳ್ಳಲು ನಿಖರ ಕಾರಣ ತಿಳಿದು ಬಂದಿಲ್ಲ. ಮುಂಜಾನೆ 3 ಗಂಟೆ ಸುಮಾರಿಗೆ ಸ್ಫೋಟದ ಸದ್ದು ಕೇಳಿಸಿತು ಎಂದು ಪ್ರತ್ಯಕ್ಷದರ್ಶಿಗಳು ತೈವಾನ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಈ ಕಟ್ಟಡವು ಸುಮಾರು 40 ವರ್ಷಗಳಷ್ಟು ಹಳೆಯದಾಗಿದೆ. ಬೆಂಕಿಯ ಜ್ವಾಲೆಯಿಂದಾಗಿ ಕೆಳ ಮಹಡಿಗಳಲ್ಲಿರುವ ಅಂಗಡಿಗಳು ಮತ್ತು ಮೇಲಿನ ಅಪಾರ್ಟ್‌ಮೆಂಟ್‌ಗಳು ಎಲ್ಲವೂ ಸುಟ್ಟು ಕರಕಲಾಗಿವೆ.