ಬೀಜಿಂಗ್: ಚೀನಾದಲ್ಲಿ ಕೊರೊನಾ ಸೋಂಕು ಹರಡುವಿಕೆ ಕುರಿತು ಮೊದಲು ಎಚ್ಚರಿಕೆಯ ಗಂಟೆ ಬಾರಿಸಿ ನಂತರ ಕೊರೊನಾಗೆ ಬಲಿಯಾದ ಡಾಕ್ಟರ್ ಲೀ ವೆನ್‌ಲಿಯಾಂಗ್ ಪತ್ನಿ ಇದೀಗ ಗಂಡುಮಗುವಿಗೆ ಜನ್ಮ ನೀಡಿದ್ದಾರೆ.
ವೀಚ್ಯಾಟ್ ಆ್ಯಪ್ ನಲ್ಲಿ ವೆನ್‌ಲಿಯಾಂಗ್ ಪತ್ನಿ ಫೂ ಕ್ಸುಯೆಜಿ ಫೋಟೋವೊಂದನ್ನು ಶೇರ್ ಮಾಡಿದ್ದು, ''ವೆನ್ಲಿಯಾಂಗ್ ಇದು ನಿಮ್ಮ ಅಂತಿಮ ಉಡುಗೊರೆ, ನೀವು ಇದನ್ನು ಸ್ವರ್ಗದಿಂದ ನೋಡಬಹುದೇ?'' ಎಂದು ಬರೆದುಕೊಂಡಿದ್ದಾರೆ ಅಂತ ಬಿಬಿಸಿ ವರದಿ ಮಾಡಿದೆ. ನಾನು ನಿಮ್ಮನ್ನು ಪ್ರೀತಿಸುತ್ತೇನೆ ಮತ್ತು ಮಕ್ಕಳನ್ನು ರಕ್ಷಿಸುತ್ತೇನೆ ಎಂದು ಅಗಲಿದ ಪತಿಗೆ ಫೂ ಕ್ಸುಯೆಜಿ ಭಾವನಾತ್ಮಕ ಸಂದೇಶ ಬರೆದಿದ್ದಾರೆ.
ಡಾಕ್ಟರ್ ವೆನ್‌ಲಿಯಾಂಗ್ ಕೊರೊನಾ ಹರಡುವಿಕೆ ಕುರಿತು ಮೊದಲು ಎಚ್ಚರಿಕೆಯ ಗಂಟೆ ಬಾರಿಸಿದ್ರು. ಸೋಂಕು ಹರಡುವಿಕೆ ಕುರಿತು ಎಲ್ಲರಿಗೂ ಎಚ್ಚರಿಕೆ ನೀಡಿದ್ರು. ಆದರೆ ಚೀನಾ ಪೊಲೀಸರು ಲೀ ಅವರು ಸುಳ್ಳು ವದಂತಿ ಹರಡುತ್ತಿದ್ದಾರೆ ಎಂದು ಆರೋಪಿಸಿ ಅವರನ್ನು ಬಂಧಿಸಿದ್ದರು. ಆದರೆ ವೆನ್‌ಲಿಯಾಂಗ್ ಕೊರೊನಾ ಸೋಂಕಿಗೆ ಬಲಿಯಾದರು. ಅವರ ಸಾವಿನ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾದ ಬಳಿಕ ಅವರನ್ನು ಆರೋಪ ಮುಕ್ತಗೊಳಿಸಲಾಯಿತು ಮತ್ತು ಚೀನಾ ಸರ್ಕಾರವು ಅವರನ್ನು ಹೀರೋ ಎಂದು ಗೌರವಿಸಿತು.
ಇದು ವೆನ್‌ಲಿಯಾಂಗ್ - ಫೂ ಕ್ಸುಯೆಜಿ ಯ 2 ನೇ ಮಗು. ವೆನ್ಲಿಯಾಂಗ್ ಸಾವನ್ನ ಆರಂಭದಲ್ಲಿ ಅವರ ಕುಟುಂಬ ಮೊದಲ ಮಗುವಿನಿಂದ ಮರೆಮಾಚಿ "ಅಪ್ಪ ವಿದೇಶಕ್ಕೆ ಹೋದರು" ಎಂದು ಹೇಳಿದ್ದರು. ವೆನ್ಲಿಯಾಂಗ್ ಮರಣದ ದುಃಖದಿಂದ ಪತ್ನಿ ಫೂ ಕ್ಸುಯೆಜಿ ಅನಾರೋಗ್ಯಕ್ಕೆ ತುತ್ತಾದರು. ಹೀಗಾಗಿ ಮಗುವಿಗೆ ಯಾವುದೇ ತೊಂದರೆಯಾಗದಂತೆ ಅವರನ್ನು ಆಸ್ಪತ್ರೆಗೆ ಸೇರಿಸಿ ನಿಗಾ ವಹಿಸಲಾಗಿತ್ತು ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.