ನಾಯ್ಪಿಟಾವ್ (ಮ್ಯಾನ್ಮಾರ್) : ಒಂದು ವರ್ಷದ ತುರ್ತು ಪರಿಸ್ಥಿತಿ ಅಂತ್ಯಗೊಂಡ ಬಳಿಕ ದೇಶದಲ್ಲಿ ಚುನಾಚವಣೆ ನಡೆಯಲಿದೆ ಎಂದು ಮ್ಯಾನ್ಮಾರ್ ಸೇನೆ ತಿಳಿಸಿದೆ.
ಮ್ಯಾನ್ಮಾರ್‌ನಲ್ಲಿ ದಂಗೆ ನಡೆಸಿರುವ ಅಲ್ಲಿನ ಸೇನೆ, ಸರ್ಕಾರದ ಕೌನ್ಸಿಲರ್, ( ಮುಖಸ್ಥೆ) ಅಂಗ್ ಸಾನ್ ಸೂಕಿ ಸೇರಿದಂತೆ ಹಲವು ಮುಖಂಡರನ್ನು ವಶಕ್ಕೆ ಪಡೆದುಕೊಂಡಿದೆ. ಸೇನೆಯ ಈ ನಿರ್ಧಾರವನ್ನು ಹಲವು ರಾಷ್ಟ್ರಗಳು ಖಂಡಿಸಿವೆ. ರಾಜಕೀಯ ನಾಯಕರನ್ನು ವಶಕ್ಕೆ ಪಡೆದ ಬಳಿಕ, ಸೇನೆ ದೇಶದಲ್ಲಿ ಒಂದು ವರ್ಷದ ತುರ್ತು ಪರಿಸ್ಥಿತಿ ಘೋಷಿಸಿದೆ.
ಸದ್ಯ, ದೇಶದ ಅಧಿಕಾರವನ್ನು ರಕ್ಷಣಾ ಸೇವೆಗಳ ಕಮಾಂಡರ್-ಇನ್ - ಚೀಫ್ ಮಿನ್ ಆಂಗ್ ಹ್ಲೇಂಗ್ ಅವರಿಗೆ ಹಸ್ತಾಂತರಿಸಲಾಗಿದ್ದು, ಮ್ಯಾನ್ಮಾರ್‌ನ ಮೊದಲ ಉಪಾಧ್ಯಕ್ಷ ಮೈಂಟ್ ಸ್ವೀ ಅವರು ದೇಶದ ಕಾರ್ಯಕಾರಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಓದಿ : ಮ್ಯಾನ್ಮಾರ್‌ನಲ್ಲಿ ಮಿಲಿಟರಿ ಕ್ರಾಂತಿ: ಸೂಕಿ ಸೇರಿ ಹಲವರು ವಶಕ್ಕೆ, ತುರ್ತುಪರಿಸ್ಥಿತಿ ಘೋಷಿಸಿದ ಸೇನೆ
ನವೆಂಬರ್ 8, 2020 ರಂದು ನಡೆದ ಚುನಾವಣೆಯಲ್ಲಿ ಭಾರೀ ವಂಚನೆ ನಡೆದಿದೆ ಎಂದು ಆರೋಪಿಸಿದ ಸೇನೆ, ಹೊಸ ಸಂಸದೀಯ ಅಧಿವೇಶನಗಳನ್ನು ಮುಂದೂಡಬೇಕೆಂದು ಒತ್ತಾಯಿತ್ತು. ಕೇಂದ್ರ ಚುನಾವಣಾ ಆಯೋಗ ಕಳೆದ ವಾರ ಸೇನೆಯ ಆರೋಪಗಳನ್ನು ತಳ್ಳಿಹಾಕಿತು. 2011 ರಲ್ಲಿ ಪ್ರಜಾಪ್ರಭುತ್ವ ಸುಧಾರಣೆಗಳು ಪ್ರಾರಂಭವಾಗುವವರೆಗೂ ಮ್ಯಾನ್ಮಾರ್ ಅಥವಾ ಬರ್ಮಾ ಸೇನೆಯ ಹಿಡಿತದಲ್ಲಿತ್ತು.
ತುರ್ತು ಪರಿಸ್ಥಿತಿ ಹಿನ್ನೆಲೆ, ಮ್ಯಾನ್ಮಾರ್‌ನ ಪ್ರಮುಖ ನಗರಗಳಲ್ಲಿ ಮೊಬೈಲ್ ಇಂಟರ್ನೆಟ್ ಡೇಟಾ ಸಂಪರ್ಕಗಳು ಮತ್ತು ಕೆಲ ಫೋನ್ ಸೇವೆಗಳಲ್ಲಿ ವ್ಯತ್ಯಯವಾಗಿದೆ. ರಾಜ್ಯ ಪ್ರಸಾರ ಎಂಆರ್ಟಿವಿ ತಾಂತ್ರಿಕ ಸಮಸ್ಯೆಯ ಕಾರಣ ಹೇಳಿ ಪ್ರಸಾರ ನಿಲ್ಲಿಸಿದೆ.
ತುರ್ತು ಪರಿಸ್ಥಿತಿಯ ವೇಳೆ ಕೇಂದ್ರ ಚುನಾವಣಾ ಆಯೋಗವನ್ನು ಸುಧಾರಿಸಲಾಗುವುದು ಮತ್ತು ಕಳೆದ ವರ್ಷ ನವೆಂಬರ್‌ನಲ್ಲಿ ನಡೆದ ಸಂಸತ್ತಿನ ಚುನಾವಣೆಗಳನ್ನು ಪರಿಶೀಲಿಸಲಾಗುವುದು ಎಂದು ಸೇನೆ ತಿಳಿಸಿದೆ.