ಸನಾ (ಯೆಮೆನ್): ಸೌದಿ ನೇತೃತ್ವದ ಪಡೆಗಳಿಗೆ ಸೇರಿದ ಅತಿದೊಡ್ಡ ಸೇನಾ ನೆಲೆಯ ಮೇಲೆ ಹೌತಿ ಬಂಡುಕೋರರು ದಾಳಿ ನಡೆಸಿದ್ದು, ಸುಮಾರು 30 ಸೈನಿಕರು ಹುತಾತ್ಮರಾಗಿದ್ದಾರೆ ಮತ್ತು 60 ಮಂದಿ ಗಾಯಗೊಂಡಿದ್ದಾರೆ ಎಂದು ಯೆಮನ್ನ ದಕ್ಷಿಣ ಸೇನಾ ಪಡೆಗಳ ವಕ್ತಾರ ಮೊಹಮದ್ ಅಲ್-ನಕೀಬ್ ತಿಳಿಸಿದ್ದಾರೆ.
ಸರ್ಕಾರದ ಹಿಡಿತದಲ್ಲಿರುವ ದಕ್ಷಿಣ ಪ್ರಾಂತ್ಯದ ಲಾಹಿಜ್‌ನಲ್ಲಿರುವ ಅಲ್-ಅನಾದ್ ಮಿಲಿಟರಿ ನೆಲೆಯ ಮೇಲೆ ಸಶಸ್ತ್ರ ಡ್ರೋನ್‌ಗಳು ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಬಳಸಿ ದಾಳಿ ನಡೆಸಲಾಗಿದೆ. ಈ ವೇಳೆ ಅಲ್ಲಿ ಅನೇಕ ಸೈನಿಕರು ವ್ಯಾಯಾಮ ಮಾಡುತ್ತಿದ್ದರು. ಈಗಾಗಲೇ ಸುಮಾರು 30 ಯೋಧರು ಮೃತಪಟ್ಟಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಏಕೆಂದರೆ ಗಾಯಗೊಂಡವರಲ್ಲಿ ಕೆಲವರ ಪರಿಸ್ಥಿತಿ ಗಂಭೀರವಾಗಿದೆ. ಅಲ್ಲದೇ ಘಟನಾ ಸ್ಥಳದಲ್ಲಿ ಇನ್ನೂ ರಕ್ಷಣಾ ಹಾಗೂ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ನಕೀಬ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಕಾಬೂಲ್ ಏರ್ಪೋರ್ಟ್ ಬಳಿ ರಾಕೆಟ್ ದಾಳಿ: ಕಂದಮ್ಮ ಬಲಿ
ಘಟನೆ ಬಗ್ಗೆ ಹೌತಿ ಬಂಡುಕೋರರು ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇರಾನ್ ಬೆಂಬಲಿತ ಹೌತಿ ಬಂಡುಕೋರರು 2014 ರಲ್ಲಿ ಯೆಮೆನ್ ರಾಜಧಾನಿ ಸನಾವನ್ನು ವಶಪಡಿಸಿಕೊಂಡ ಬಳಿಕ ಯುದ್ಧ ಮತ್ತು ದಾಳಿ ನಡೆಸುತ್ತಾ ಬಂದಿದ್ದಾರೆ. ನಿನ್ನೆಯಷ್ಟೇ ಸೌದಿ ನೇತೃತ್ವದ ಪಡೆಗಳು ನಡೆಸಿದ್ದ ವೈಮಾನಿಕ ದಾಳಿಯಲ್ಲಿ 20 ಮಂದಿ ಬಂಡುಕೋರರನ್ನು ಸದೆಬಡಿಯಲಾಗಿತ್ತು.