ಕಾಬೂಲ್(ಅಫ್ಘಾನಿಸ್ತಾನ): ತಾಲಿಬಾನ್ ಆಡಳಿತಕ್ಕೆ ಬಂದ ನಂತರ ಅಲ್ಲಿನ ಜನರ ಬದುಕು ತೀರಾ ದುಸ್ತರವಾಗಿದೆ. ಮೊದಲೇ ಸಂಕಷ್ಟದಲ್ಲಿದ್ದ ಅಫ್ಘಾನಿಸ್ತಾನ ಜನತೆಗೆ ಬಾಣಲೆಯಿಂದ ಜಾರಿ ಬೆಂಕಿಗೆ ಬಿದ್ದಂತಾಗಿದೆ. ಹೇಗೋ ಜೀವನ ಸಾಗಿಸುತ್ತಿದ್ದ ಅಲ್ಲಿನ ನಾಗರಿಕರು ತಮ್ಮ ಕುಟುಂಬಗಳನ್ನು ರಕ್ಷಿಸಿಕೊಳ್ಳಲು ಮಕ್ಕಳನ್ನು ಮಾರಲು ಮತ್ತು ಅಂಗಾಂಗಗಳನ್ನು ಮಾರಲು ಮುಂದಾಗಿದ್ದಾರೆ ಎಂದು ಟೋಲೋ ನ್ಯೂಸ್ ವರದಿ ಮಾಡಿದೆ.
ತಾಲಿಬಾನ್ ಅಧಿಕಾರ ಹಿಡಿಯುವುದಕ್ಕಾಗಿ ಆಫ್ಘನ್ ಪ್ರಜಾಪ್ರಭುತ್ವ ಸರ್ಕಾರದೊಂದಿಗೆ ಸಂಘರ್ಷಕ್ಕೆ ಇಳಿದಾಗ, ಬದುಕುಳಿಯಲು ಬೇರೆಡೆಗೆ ಸ್ಥಳಾಂತರಗೊಂಡ ಕುಟುಂಬಗಳ ಮುಖ್ಯಸ್ಥರು ಈಗ ಜೀವನ ಸಾಗಿಸುವ ಸಲುವಾಗಿ ತಮ್ಮ ಮಕ್ಕಳನ್ನು ಮತ್ತು ಅವರ ಅಂಗಾಂಗಗಳ ಮಾರಾಟ ಮಾಡುತ್ತಿದ್ದಾರೆ ಎಂಬ ಆತಂಕಕಾರಿ ಮಾಹಿತಿ ಹೊರಬಿದ್ದಿದೆ.
ಅಫ್ಘಾನಿಸ್ತಾನದ ಉತ್ತರ ಪ್ರಾಂತ್ಯಗಳಾದ ಬಾಲ್ಖ್, ಸರ್-ಎ-ಪುಲ್, ಫರಿಯಾಬ್ ಮತ್ತು ಜಾವ್ಜಾನ್ ಪ್ರದೇಶಗಳಲ್ಲಿನ ಜನರು ಇಂತಹ ದುಸ್ಥಿಗೆ ತಲುಪಿದ್ದಾರೆ. ಇದನ್ನು ತಡೆಯಲು ಅನೇಕ ಸ್ವಯಂ ಸೇವಾ ಸಂಸ್ಥೆಗಳು ಕೆಲಸ ಮಾಡುತ್ತಿವೆ.
ಮಕ್ಕಳ ಬೆಲೆ 70 ಸಾವಿರ ರೂಪಾಯಿಯಿಂದ ಆರಂಭ..
ಇಲ್ಲಿನ ಜನರು ತಮ್ಮ ಕುಟುಂಬದ ಪೋಷಣೆಗೆ ಮಗುವನ್ನು 1 ಲಕ್ಷ ಆಫ್ಘನಿ (ಆಫ್ಘನ್ ಕರೆನ್ಸಿ) ಒಂದೂವರೆ ಲಕ್ಷ ಆಫ್ಘನಿ ಮಾರಾಟ ಮಾಡುತ್ತಾರೆ. ಒಂದು ಲಕ್ಷ ಆಫ್ಘನಿ ಮೌಲ್ಯ ಭಾರತದಲ್ಲಿ 70 ಸಾವಿರ ರೂಪಾಯಿಗಳು. ಹಾಗೆಯೇ ಒಂದು ಮೂತ್ರಪಿಂಡದ ಬೆಲೆ ಒಂದೂವರೆ ಲಕ್ಷ ಆಫ್ಘನಿಯಿಂದ 2 ಲಕ್ಷದ 20 ಸಾವಿರ ಆಫ್ಘನಿ ಇದೆ.
ಬಾಲ್ಖ್ ಪ್ರಾಂತ್ಯದ ರಾಜಧಾನಿಯಾದ ಮಝರ್-ಎ-ಷರೀಫ್‌ನಲ್ಲಿರುವ ಶಿಬಿರದಲ್ಲಿ ಕುಟುಂಬಗಳು ಈ ರೀತಿಯಲ್ಲಿ ಜೀವನ ಸಾಗಿಸುತ್ತಿವೆ. ಬಡತನ, ಆರ್ಥಿಕ ಪರಿಸ್ಥಿತಿ ಮತ್ತು ಕೋವಿಡ್ ಹೊಡೆತದಿಂದಾಗಿ ಮಗು ಮಾರಾಟ ಅಥವಾ ಅಂಗಾಂಗ ಮಾರಾಟದಂತಹ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಕುಟುಂಬಗಳು ಹೇಳಿವೆ.
ಪ್ರತಿ ಕುಟುಂಬವು 2ರಿಂದ ಏಳು ಮಕ್ಕಳನ್ನು ಹೊಂದಿವೆ. ಹಲವಾರು ಸಂಘಟನೆಗಳು ಈ ಜನರಿಗೆ ನಗದು ನೆರವು ಮತ್ತು ಆಹಾರವನ್ನು ಒದಗಿಸುವ ಕೆಲಸ ಮಾಡುತ್ತಿವೆ. ದೇಶವು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದು, ವಿದೇಶಗಳ ಸಹಾಯಕ್ಕಾಗಿ ಆಫ್ಘನ್ ಸಮುದಾಯಗಳು ಒತ್ತಾಯಿಸಿವೆ.
ಇದನ್ನೂ ಓದಿ: ಆಫ್ಘನ್ನಲ್ಲಿ ಸಂಗೀತ ಸಾಧನಗಳನ್ನ ಸುಟ್ಟ ತಾಲಿಬಾನಿಗಳು.. ಕಣ್ಣೀರಿಟ್ಟ ಸಂಗೀತಗಾರ..