ವಾಷಿಂಗ್ಟನ್: ಅಫ್ಘಾನಿಸ್ತಾನದಲ್ಲಿ ಆಗಸ್ಟ್ 14ರಿಂದ ಅರಾಜಕತೆ ಉಂಟಾಗಿದ್ದು, ಇಡೀ ರಾಷ್ಟ್ರವೇ ತಾಲಿಬಾನ್ ರಾಕ್ಷಸರ ಕೈ ಸೆರೆಯಾಗಿದೆ. ಈ ಸಂದರ್ಭದಲ್ಲಿ ಅಲ್ಲಿನ ಜನರು ಸೇರಿದಂತೆ ಅಫ್ಘನ್ನಲ್ಲಿ ನೆಲೆಸಿರುವ ಬೇರೆ ದೇಶದ ಜನರನ್ನು ಸ್ಥಳಾಂತರಿಸಲು ಅಮೆರಿಕ, ರಷ್ಯಾ, ಭಾರತ ಸೇರಿದಂತೆ ಅನೇಕ ರಾಷ್ಟ್ರಗಳು ಹರಸಾಹಸ ಪಡುತ್ತಿವೆ. ಈ ದಿನಗಳನ್ನು ಹೊರತುಪಡಿಸಿ, ಯುಎಸ್ ಸೈನಿಕರು ಅಫ್ಘಾನ್ ನೆಲದಲ್ಲಿ ಕೆಲ ಭೀಕರ ದಿನಗಳನ್ನು ಅನುಭವಿಸಿದ್ದಾರೆ. ಅದರ ಸಂಪೂರ್ಣ ಮಾಹಿತಿ ಇಲ್ಲಿದೆ.
- ಆಗಸ್ಟ್ 26, 2021: ಕಾಬೂಲ್ ವಿಮಾನ ನಿಲ್ದಾಣದ ಹೊರಗಡೆ ಸಂಭವಿಸಿದ ಅವಳಿ ಆತ್ಮಾಹುತಿ ದಾಳಿಯಲ್ಲಿ ಅಮೆರಿಕದ 12 ಸೇನಾ ಸಿಬ್ಬಂದಿ ಸಾವನ್ನಪ್ಪಿ, 15 ಸಿಬ್ಬಂದಿ ಗಾಯಗೊಂಡಿದ್ದಾರೆ. ಈ ಘಟನೆ ಅಲ್ಲಿನ ಜನರನ್ನು ಏರ್ಲಿಫ್ಟ್ ಮಾಡಲು ಸಿಬ್ಬಂದಿ ಸಿದ್ಧತೆ ನಡೆಸುತ್ತಿದ್ದ ಸಂದರ್ಭದಲ್ಲಿ ನಡೆದಿದೆ.
- ಡಿಸೆಂಬರ್ 21, 2015: ಆತ್ಮಾಹುತಿ ಬಾಂಬ್ ದಾಳಿಕೋರರು ಸ್ಫೋಟಕಗಳನ್ನು ತುಂಬಿದ ಮೋಟಾರ್ ಸೈಕಲ್ ಅನ್ನು ಜಂಟಿ ನ್ಯಾಟೋ-ಅಫ್ಘಾನ್ ಗಸ್ತು ಪ್ರದೇಶಕ್ಕೆ ನುಗ್ಗಿಸಿದ್ದರು. ಈ ಘಟನೆಯಿಂದ ಅಮೆರಿಕದ 6 ಸೈನಿಕರು ಕೊನೆಯುಸಿರೆಳೆದಿದ್ದರು.
- ಅಕ್ಟೋಬರ್ 2, 2015: ಯುಎಸ್ ವಾಯುಪಡೆಯ ಸಿ -130 ಜೆ ಸಾರಿಗೆ ವಿಮಾನ ಅಪಘಾತಕ್ಕೀಡಾದಾಗ ಆರು ಯುಎಸ್ ಸೇವಾ ಸಿಬ್ಬಂದಿ ಸೇರಿದಂತೆ 11 ಜನರು ಸಾವನ್ನಪ್ಪಿದರು.
- ಡಿಸೆಂಬರ್ 17, 2013: ಹೆಲಿಕಾಪ್ಟರ್ ಅಪಘಾತಕ್ಕೀಡಾಗಿ ಆರು ಯುಎಸ್ ಸೇವಾ ಸಿಬ್ಬಂದಿ ಸಾವನ್ನಪ್ಪಿದರು.
- ಮೇ 4, 2013: ತಾಲಿಬಾನ್ ತಮ್ಮ ಆಕ್ರಮಣಕಾರಿ ದಾಳಿಗಳನ್ನು ಮುಂದುವರಿಸಿ, ಯುಎಸ್ ಸೈನಿಕರು ಮತ್ತು ನ್ಯಾಟೋ ನೇತೃತ್ವದ ಒಕ್ಕೂಟದ ಸಿಬ್ಬಂದಿಯನ್ನು ಹತ್ಯೆಗೈದಿದ್ದರು.
- ಮಾರ್ಚ್ 11, 2013: ದಕ್ಷಿಣ ಅಫ್ಘಾನಿಸ್ತಾನದಲ್ಲಿ ನಡೆದ ಹೆಲಿಕಾಪ್ಟರ್ ಅಪಘಾತದಲ್ಲಿ ಅಮೆರಿಕದ ಐವರು ಸೇನಾ ಸಿಬ್ಬಂದಿ ಸಾವನ್ನಪ್ಪಿದರು.
- ಆಗಸ್ಟ್ 6, 2011: ರಾಕೆಟ್ಚಾಲಿತ ಗ್ರೆನೇಡ್ ಹೊಂದಿರುವ ಶಸ್ತ್ರಸಜ್ಜಿತ ಬಂಡುಕೋರರು ಯುಎಸ್ ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸಿದ್ದರು. ಘಟನೆಯಲ್ಲಿ 30 ಅಮೆರಿಕನ್ ಸೈನಿಕರು ಮತ್ತು ಎಂಟು ಅಫ್ಘಾನ್ ಸೈನಿಕರು ಸಾವನ್ನಪ್ಪಿದ್ದರು.
- ಮೇ 26, 2011: ಗಸ್ತು ತಿರುಗುತ್ತಿದ್ದ ಮೈದಾನದಲ್ಲಿ ಬಾಂಬ್ ಸ್ಫೋಟಗೊಂಡು ಏಳು ಯುಎಸ್ ಸೈನಿಕರು ಸೇರಿದಂತೆ ಒಂಬತ್ತು ನ್ಯಾಟೋ ಸೇವಾ ಸಿಬ್ಬಂದಿ ಸಾವನ್ನಪ್ಪಿದ್ದರು.
- ಏಪ್ರಿಲ್ 19, 2011: ಕಾಬೂಲ್‌ನಲ್ಲಿರುವ ಅಫ್ಘನ್ ವಾಯುಪಡೆ ಪ್ರಧಾನ ಕಚೇರಿಯ ಸಾಮಾನ್ಯ ಸಭೆಯಲ್ಲಿ ಅಫ್ಘಾನಿಸ್ತಾನ ಅಧಿಕಾರಿಯೊಬ್ಬರು ಎಂಟು ಯುಎಸ್ ಏರ್‌ಮೆನ್ ಮತ್ತು ಒಬ್ಬ ಅಮೆರಿಕನ್ ಪ್ರಜೆಯನ್ನು ಕೊಂದಿದ್ದರು.
- ಆಗಸ್ಟ್ 27, 2010: ನಾಡಬಾಂಬ್‌ಗಳನ್ನು ಬಳಸಿ ದಕ್ಷಿಣ ಮತ್ತು ಪೂರ್ವ ಅಫ್ಘಾನಿಸ್ತಾನದಲ್ಲಿ ಮೂರು ಯುಎಸ್ ಸೈನಿಕರನ್ನು ಹತ್ಯೆ ಮಾಡಲಾಗಿತ್ತು.
- ಜೂನ್ 8, 2010: ಅಫ್ಘಾನ್ ಪೊಲೀಸರಿಗೆ ತರಬೇತಿ ನೀಡುತ್ತಿರುವ ಸಂದರ್ಭದಲ್ಲಿ ನಡೆದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಏಳು ಅಮೆರಿಕನ್ ಪಡೆಗಳು, ಇಬ್ಬರು ಆಸ್ಟ್ರೇಲಿಯನ್ನರು ಮತ್ತು ಫ್ರೆಂಚ್ ಸೈನಿಕರು ಅಸುನೀಗಿದ್ದರು.
- ಅಕ್ಟೋಬರ್ 27, 2009: ದಕ್ಷಿಣ ಅಫ್ಘಾನಿಸ್ತಾನದಲ್ಲಿ ನಡೆದ ಎರಡು ಪ್ರತ್ಯೇಕ ಬಾಂಬ್ ದಾಳಿಯಲ್ಲಿ ಎಂಟು ಅಮೆರಿಕನ್ ಸೈನಿಕರು ಸಾವನ್ನಪ್ಪಿದ್ದರು.
- ಅಕ್ಟೋಬರ್ 26, 2009: ಪ್ರತ್ಯೇಕ ಹೆಲಿಕಾಪ್ಟರ್ ಅಪಘಾತಗಳಲ್ಲಿ 11 ಅಮೆರಿಕನ್ ಸೈನಿಕರು ಸಾವನ್ನಪ್ಪಿದರು. ಪಶ್ಚಿಮ ಅಫ್ಘಾನಿಸ್ತಾನದಲ್ಲಿ ಒಂದು ಹೆಲಿಕಾಪ್ಟರ್ ಉರುಳಿದ್ದು, ಯುಎಸ್ ಸರ್ಕಾರಕ್ಕಾಗಿ ಕೆಲಸ ಮಾಡುತ್ತಿದ್ದ ಏಳು ಸೈನಿಕರು ಮತ್ತು ಮೂವರು ನಾಗರಿಕರು ಅಸು ನೀಗಿದ್ದಾರೆ. ದಕ್ಷಿಣ ಅಫ್ಘಾನಿಸ್ತಾನದಲ್ಲಿ ನಡೆದ ಇನ್ನೊಂದು ಘಟನೆಯಲ್ಲಿ, ಎರಡು ಯುಎಸ್ ಚಾಪರ್‌ಗಳು ಹಾರಾಟದ ವೇಳೆ ಡಿಕ್ಕಿ ಹೊಡೆದು ನಾಲ್ಕು ಅಮೆರಿಕನ್ ಸೈನಿಕರು ಸಾವನ್ನಪ್ಪಿದ್ದಾರೆ.
- ಅಕ್ಟೋಬರ್ 3, 2009: ನೂರಿಸ್ತಾನದ ಕಾಮ್ದೇಶ್‌ನಲ್ಲಿನ ವಿಭಾಗದ ಮೇಲೆ 300 ಉಗ್ರಗಾಮಿಗಳು ದಾಳಿ ಮಾಡಿದಾಗ ಎಂಟು ಯುಎಸ್ ಸೈನಿಕರು ಸಾವನ್ನಪ್ಪಿದರು. ಇನ್ನೊಬ್ಬ ಸೈನಿಕ ವಾರ್ಡಕ್ ಪ್ರಾಂತ್ಯದಲ್ಲಿ ಬಾಂಬ್ ನಿಶ್ಯಸ್ತ್ರಗೊಳಿಸಲು ಪ್ರಯತ್ನಿಸುತ್ತಿದ್ದಾಗ ಸ್ಪೋಟಗೊಂಡು ಕೊನೆಯುಸಿರೆಳೆದಿದ್ದರು.
- ಜುಲೈ 13, 2008: ನೂರಿಸ್ತಾನದ ವನತ್ನಲ್ಲಿರುವ ಠಾಣೆಯ ಮೇಲೆ ರಾಕೆಟ್ ಚಾಲಿತ ಗ್ರೆನೇಡ್ ದಾಳಿ ಮಾಡಿದಾಗ ಒಂಬತ್ತು ಅಮೆರಿಕನ್ ಸೈನಿಕರು ಸಾವನ್ನಪ್ಪಿದರು.
- ಫೆಬ್ರವರಿ 18, 2007: ಜಬುಲ್ ಪ್ರಾಂತ್ಯದ ಶಹಜೋಯ್ ಜಿಲ್ಲೆಯಲ್ಲಿ ಯುಎಸ್ ಹೆಲಿಕಾಪ್ಟರ್ ಪತನಗೊಂಡು ಎಂಟು ಅಮೆರಿಕನ್ ಸೈನಿಕರು ಸಾವನ್ನಪ್ಪಿದರು.
- ಮೇ 5, 2006: ಪೂರ್ವ ಅಫ್ಘಾನಿಸ್ತಾನದಲ್ಲಿ ಯುದ್ಧ ಕಾರ್ಯಾಚರಣೆಯ ಸಮಯದಲ್ಲಿ ಸಿಎಚ್ -47 ಚಿನೂಕ್ ಹೆಲಿಕಾಪ್ಟರ್ ಅಪಘಾತಗೊಂಡು 10 ಅಮೆರಿಕನ್ ಸೈನಿಕರು ಸಾವನ್ನಪ್ಪಿದರು.
- ಜೂನ್ 28, 2005: ವಿಶೇಷ ಪಡೆಗಳ ಸೈನಿಕರು ಇದ್ದ ಎಂಎಚ್ -47 ಚಿನೂಕ್ ಹೆಲಿಕಾಪ್ಟರ್ ಅನ್ನು ಬಂಡುಕೋರರು ಹೊಡೆದುರುಳಿಸಿದಾಗ 16 ಯುಎಸ್ ಸೈನಿಕರು ಸಾವನ್ನಪ್ಪಿದ್ದರು.
- ಏಪ್ರಿಲ್ 6, 2005: ಬಗ್ರಾಮ್‌ನಲ್ಲಿರುವ ಯುಎಸ್ನ ಮುಖ್ಯ ನೆಲೆಗೆ ಹಿಂತಿರುಗುವಾಗ ಬಿರುಗಾಳಿಯಲ್ಲಿ ಹೆಲಿಕಾಪ್ಟರ್ ಸಿಲುಕಿ ಅಪಘಾತ ಸಂಭವಿಸಿತ್ತು. ಇದರಲ್ಲಿ 15 ಸೈನಿಕರು ಮತ್ತು ಮೂವರು ಅಮೆರಿಕನ್ ನಾಗರಿಕರು ಸಾವನ್ನಪ್ಪಿದರು.
- ಜನವರಿ 29, 2004: ಶಸ್ತ್ರಾಸ್ತ್ರ ಸಂಗ್ರಹ ಮಾಡುತ್ತಿದ್ದ ಸಂದರ್ಭದಲ್ಲಿ ಸ್ಫೋಟ ಸಂಭವಿಸಿ ಎಂಟು ಯುಎಸ್ ಸೈನಿಕರು ಸಾವನ್ನಪ್ಪಿದ್ದರು.
- ಮಾರ್ಚ್ 23, 2003: ಆಗ್ನೇಯ ಅಫ್ಘಾನಿಸ್ತಾನದಲ್ಲಿ ಗಾಯಗೊಂಡ ಇಬ್ಬರು ಅಫ್ಘಾನ್ ಮಕ್ಕಳಿಗೆ ಸಹಾಯ ಮಾಡಲೆಂದು ಧಾವಿಸಿದ ಸಂದರ್ಭದಲ್ಲಿ ಹೆಲಿಕಾಪ್ಟರ್ ಅಪಘಾತವಾಗಿದ್ದು, ಆರು ಮಂದಿ ಸಾವನ್ನಪ್ಪಿದರು.
- ಮಾರ್ಚ್ 4, 2002: ಎರಡು ಹೆಲಿಕಾಪ್ಟರ್‌ಗಳು ಗುಂಡಿನ ದಾಳಿಗೆ ಸಿಲುಕಿ ಏಳು ಅಮೆರಿಕನ್ ಸೈನಿಕರು ಸಾವನ್ನಪ್ಪಿದರು.
- ಜನವರಿ 9, 2002: ಅಫ್ಘಾನಿಸ್ತಾನದಲ್ಲಿ ಸೈನ್ಯಕ್ಕೆ ಮರು ಸರಬರಾಜು ಮಾಡುತ್ತಿದ್ದ ಯುಎಸ್ ಮಿಲಿಟರಿ ಇಂಧನ ತುಂಬುವ ವಿಮಾನ ಪಾಕಿಸ್ತಾನದಲ್ಲಿ ಅಪಘಾತಕ್ಕೀಡಾಗಿದ್ದು, ಅದರಲ್ಲಿದ್ದ ಎಲ್ಲಾ ಏಳು ನೌಕಾ ಸಿಬ್ಬಂದಿ ಸಾವನ್ನಪ್ಪಿದರು.