ಬೀಜಿಂಗ್(ಚೀನಾ): ಚೀನಾದಲ್ಲಿ ಮತ್ತೊಮ್ಮೆ ಕೊರೊನಾ ವೈರಸ್ ಹಾವಳಿ ಉಲ್ಬಣಗೊಂಡಿದ್ದು, ಹೀಗಾಗಿ ಕೆಲವೊಂದು ದೇಶಗಳಿಗೆ ತೆರಳುವ ವಿಮಾನಯಾನ ಸೇವೆ ಬಂದ್ ಮಾಡಲಾಗಿದ್ದು, ಶಾಲಾ - ಕಾಲೇಜ್ ಬಂದ್ ಮಾಡಿ ಮಹತ್ವದ ಆದೇಶ ಹೊರಡಿಸಲಾಗಿದೆ. ಇದರ ಬೆನ್ನಲ್ಲೇ ಸಾಮೂಹಿಕವಾಗಿ ಎಲ್ಲರಿಗೂ ಕೊರೊನಾ ಪರೀಕ್ಷೆ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ.
ಚೀನಾದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗ್ತಿದ್ದಂತೆ ಬೇರೆ ದೇಶಗಳಿಂದ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿತ್ತು. ಇದೇ ಕಾರಣದಿಂದಾಗಿ ಕೋವಿಡ್ ಮತ್ತುಷ್ಟು ಹರಡಿದೆ ಎಂದು ವರದಿಯಾಗಿದೆ. ಹೀಗಾಗಿ ಅಲ್ಲಿನ ಸರ್ಕಾರ ಕೆಲವೊಂದು ಮಹತ್ವದ ನಿರ್ಧಾರ ಕೈಗೊಂಡಿದೆ.
ಪ್ರಮುಖವಾಗಿ ಚೀನಾ ಗಡಿ ನಿರ್ಬಂಧ ಸಹ ವಿಧಿಸಿದ್ದು, ಲಾಕ್ಡೌನ್ನಂತಹ ಕ್ರಮ ಕೈಗೊಂಡಿದೆ. ಕಳೆದ ಕೆಲ ದಿನಗಳಿಂದ ಚೀನಾದ ಕೆಲವೊಂದು ಪ್ರದೇಶಗಳಲ್ಲಿ ಹೆಚ್ಚಿನ ಕೋವಿಡ್ ಪ್ರಕರಣ ಕಾಣಿಸಿಕೊಳ್ಳುತ್ತಿರುವುದು ಅಲ್ಲಿನ ಸರ್ಕಾರದ ನಿದ್ದೆ ಗೆಡಿಸಿದೆ.
ಇದನ್ನೂ ಓದಿರಿ: ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ಟ್ರೈನಿ IASನಿಂದ ಯುವತಿಗೆ ಲೈಂಗಿಕ ದೌರ್ಜನ್ಯ!?
ಸಂಪೂರ್ಣವಾಗಿ ಹತೋಟಿಯಲ್ಲಿದ್ದ ಕೊರೊನಾ ದಿಢೀರ್ ಉಲ್ಭಣಗೊಳ್ಳಲು ಇಲ್ಲಿಗೆ ಭೇಟಿ ನೀಡಿರುವ ವೃದ್ಧ ದಂಪತಿ ಎಂದು ಅಧಿಕಾರಿಗಳು ಹೇಳಿಕೊಂಡಿದ್ದು, ಇವರು ಶಾಂಘೈ, ಕ್ಸಿಯಾಮ್, ಗನ್ಸು, ಬೀಜಿಂಗ್ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಸಂಚಾರ ನಡೆಸಿದ್ದಾಗಿ ವರದಿಯಾಗಿದೆ.
ಪ್ರವಾಸಿ ತಾಣ, ಶಾಲೆ-ಕಾಲೇಜು, ಮನರಂಜನಾ ಸ್ಥಳಗಳನ್ನ ಸಂಪೂರ್ಣವಾಗಿ ಬಂದ್ ಮಾಡಲಾಗಿದ್ದು, ಅಗತ್ಯ ಇದ್ದರೆ ಮಾತ್ರ ಮನೆಯಿಂದ ಹೊರಗಡೆ ಬರಲು ಸೂಚನೆ ನೀಡಲಾಗಿದೆ. ಕಳೆದ ಕೆಲ ದಿನಗಳಿಂದ ಚೀನಾದ ಆಗ್ನೇಯ ಪ್ರಾಂತ್ಯದಲ್ಲಿ ಕೊರೊನಾ ಸೋಂಕಿತ ಪ್ರಕರಣಗಳಲ್ಲಿ ಏಕಾಏಕಿ ಏರಿಕೆ ಕಾಣಿಸಿಕೊಂಡಿದ್ದು, ಪರೀಕ್ಷೆ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ.