ಇಸ್ಲಾಮಾಬಾದ್: ಕೊರೊನಾ ವೈರಸ್ ವಿರುದ್ಧ ಹೋರಾಡಲು ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಸರ್ಕಾರ ಅಸಮರ್ಥವಾಗಿದ್ದು, ಈ ಕೂಡಲೇ ರಾಜ್ಯ ದರ್ಜೆ ಆರೋಗ್ಯ ಸಚಿವ ಜಾಫರ್ ಮಿರ್ಜಾ ಅವರನ್ನು ಸಂಪುಟದಿಂದ ಕಿತ್ತೊಗೆಯುವಂತೆ ಪಾಕ್ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಗುಲ್ಜಾರ್ ಅಹ್ಮದ್ ಸೋಮವಾರ ಆದೇಶಿಸಿದ್ದಾರೆ.
ಪ್ರಧಾನಿ ಇಮ್ರಾನ್ ಖಾನ್ ಅವರ ವಿಶೇಷ ಸಲಹೆಗಾರರ ತಂಡದ ಸದಸ್ಯರ ಮೇಲಿನ ಗಂಭೀರ ಅಕ್ರಮಗಳ ಆರೋಪ ಹಾಗೂ ಮಿರ್ಜಾ ಅವರ ಕಾರ್ಯವೈಖರಿಯ ಕುರಿತು ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
"ವಿಶ್ವದ ಎಲ್ಲ ರಾಷ್ಟ್ರಗಳು ಕೊರೊನಾ ತುರ್ತು ಪರಿಸ್ಥಿತಿ ನಿಭಾಯಿಸಲು ಹೊಸ ನಿಯಮಗಳನ್ನು ಜಾರಿ ಮಾಡಿವೆ. ಆದರೆ, ಇಲ್ಲಿನ ಸರ್ಕಾರಕ್ಕೆ ಬರೀ ರ್ಯಾಲಿಗಳನ್ನು ಆಯೋಜಿಸುವುದೇ ಒಂದು ಕೆಲಸವಾಗಿದೆ. ಪ್ರಧಾನಿ ಇಮ್ರಾನ್ ಖಾನ್ ಬೇರಾವುದೋ ಲೋಕದಲ್ಲಿದ್ದಾರೆ. ಎಲ್ಲ ರಾಜ್ಯಗಳು ತಮಗೆ ತೋಚಿದಂತೆ ವರ್ತಿಸುತ್ತಿವೆ." ಎಂದು ಪಾಕ್ ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.