ಬೀಜಿಂಗ್: ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರು ಈ ವಾರ ಪರ್ಷಿಯನ್ ಕೊಲ್ಲಿ ರಾಷ್ಟ್ರವಾದ ಕತಾರ್‌ಗೆ ಪ್ರವಾಸದ ವೇಳೆ ತಾಲಿಬಾನ್ ಪ್ರತಿನಿಧಿಗಳನ್ನು ಭೇಟಿಯಾಗಲಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಭೇಟಿ ಅಫ್ಘಾನಿಸ್ತಾನದ ಪರಿಸ್ಥಿತಿ ಮತ್ತು ಜಂಟಿ ಕಾಳಜಿಯ ವಿಷಯಗಳ ಬಗ್ಗೆ ಆಳವಾದ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳುವ ಅವಕಾಶವನ್ನು ಒದಗಿಸುತ್ತದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.
ಈ ವರ್ಷದ ಆಗಸ್ಟ್‌ನಿಂದ ಅಫ್ಘಾನಿಸ್ತಾನದ ಪರಿಸ್ಥಿತಿಯು ಮೂಲ ಬದಲಾವಣೆಗಳಿಗೆ ಒಳಗಾಗಿದೆ. ಆಫ್ಘನ್ ಜನರು ಸ್ವತಂತ್ರವಾಗಿ ದೇಶದ ಭವಿಷ್ಯವನ್ನು ನಿರ್ಧರಿಸಲು ಐತಿಹಾಸಿಕ ಅವಕಾಶವನ್ನು ಪಡೆದುಕೊಂಡಿದ್ದಾರೆ. ಇದರ ನಡುವೆ ಅವರು ಇನ್ನೂ ಅನೇಕ ತೊಂದರೆಗಳನ್ನು ಮತ್ತು ಸವಾಲುಗಳನ್ನು ಎದುರಿಸುತ್ತಿದ್ದಾರೆ ಮತ್ತು ಬಾಹ್ಯ ಬೆಂಬಲದ ತುರ್ತು ಅಗತ್ಯತೆ ಇದೆ ಎಂದು ವಾಂಗ್ ಹೇಳಿದ್ದಾರೆ.
ಸಾಂಪ್ರದಾಯಿಕ ಸ್ನೇಹಪರ ಮತ್ತು ಅಫ್ಘಾನಿಸ್ತಾನದ ಪಾಲುದಾರರಾಗಿ ಆಫ್ಘನ್ ಪರಿಸ್ಥಿತಿಯ ಅಭಿವೃದ್ಧಿಯನ್ನು ಸಕಾರಾತ್ಮಕ ದಿಕ್ಕಿನಲ್ಲಿ ಮಾರ್ಗದರ್ಶನ ಮಾಡಲು ಹಾಗೆ ಅಲ್ಲಿನ ಜನರ ತೊಂದರೆಗಳನ್ನು ನಿವಾರಿಸುವ ಉದ್ದೇಶದಿಂದ ಸಹಾಯ ಮಾಡಲು ಚೀನಾ ಯಾವಾಗಲೂ ಸಿದ್ಧ ಎಂದು ತಾಲಿಬಾನ್ಗೆ ಶಕ್ತಿ ತುಂಬಿದ್ದಾರೆ.
ಅಫ್ಘಾನಿಸ್ತಾನದ ಚುನಾಯಿತ ಸರ್ಕಾರದಿಂದ ಅಧಿಕಾರವನ್ನು ವಶಪಡಿಸಿಕೊಳ್ಳುವ ಸ್ವಲ್ಪ ಸಮಯದ ಮೊದಲು, ಚೀನಾದ ತಿಯಾನ್ಜಿನ್ ನಗರದಲ್ಲಿ ಜುಲೈನಲ್ಲಿ ವಾಂಗ್ ಉನ್ನತ ತಾಲಿಬಾನ್ ನಾಯಕ ಅಬ್ದುಲ್ ಘನಿ ಬರದಾರ್ ನೇತೃತ್ವದ ನಿಯೋಗವನ್ನು ಭೇಟಿಯಾಗಿದ್ದರು.
ಆ ಸಭೆಯಲ್ಲಿ, ವಾಂಗ್ ತಾಲಿಬಾನ್ ಅನ್ನು ಅಫ್ಘಾನಿಸ್ತಾನದಲ್ಲಿ ಒಂದು ಪ್ರಮುಖ ಮಿಲಿಟರಿ ಮತ್ತು ರಾಜಕೀಯ ಶಕ್ತಿ ಎಂದು ಉಲ್ಲೇಖಿಸಿದ್ದರು.