ಬೀಜಿಂಗ್: ಕೋವಿಡ್ ಸಾಂಕ್ರಾಮಿಕದಿಂದ ಜಗತ್ತು ಚೇತರಿಸಿಕೊಳ್ಳುತ್ತಿದ್ದು, ಕಾರ್ಖಾನೆಗಳು ತೆರೆದಿವೆ. ಹೀಗಾಗಿ ಮತ್ತೆ ಚೀನಾ ವಸ್ತುಗಳಿಗೆ ವಿದೇಶಿ ನೆಲಗಳಲ್ಲಿ ಬೇಡಿಕೆ ಕೂಡ ಹೆಚ್ಚಾಗಿದೆ.
ಪೂರ್ವ ಲಡಾಖ್ನ ಗಾಲ್ವಾನ್ ಕಣಿವೆಯಲ್ಲಿ ಭಾರತ-ಚೀನಾ ಸೈನಿಕರ ನಡುವೆ ನಡೆದ ಸಂಘರ್ಷದ ಬಳಿಕ ಭಾರತವು 200ಕ್ಕೂ ಹೆಚ್ಚು ಚೀನೀ ಆ್ಯಪ್ಗಳನ್ನು ಬ್ಯಾನ್ ಮಾಡಿತ್ತು. 'ಮೇಡ್ ಇನ್ ಚೀನಾ' ವಸ್ತುಗಳಿಗೆ ಭಾರತ ಬಹಿಷ್ಕಾರ ಹಾಕಿದ್ದರಿಂದ 17 ಬಿಲಿಯನ್ ಯುಎಸ್ಡಿ ( ಅಂದಾಜು 1.29 ಲಕ್ಷ ಕೋಟಿ) ಮೌಲ್ಯದ ಚೀನಾ ರಫ್ತಿಗೆ ಹೊಡೆತ ಬಿದ್ದಿತ್ತು.
ಇದನ್ನೂ ಓದಿ: ಇ-ಸಿಗರೆಟ್ ಬಗ್ಗೆ WHO ನಿಲುವು ವಿನಾಶಕಾರಿ: ನ್ಯಾನ್ಸಿ ಲೌಕಾಸ್
ವೈರಸ್ ಕಾರಣದಿಂದ ಅನೇಕ ರಾಷ್ಟ್ರಗಳು ಚೀನಾದೊಂದಿಗೆ ವ್ಯಾಪಾರ-ವ್ಯವಹಾರವನ್ನು ಸ್ಥಗಿತಗೊಳಿಸಿದ್ದವು. ಹೀಗಾಗಿ 2020ರಲ್ಲಿ ಕುಸಿದಿದ್ದ ಚೀನಾ ರಫ್ತು ಈ ವರ್ಷದ ಮೊದಲೆರಡು ತಿಂಗಳಲ್ಲೇ ಶೇ.60.6 ರಷ್ಟು ಅಂದರೆ 468.9 ಶತಕೋಟಿ ಡಾಲರ್‌ಗೆ ಏರಿಕೆಯಾಗಿದೆ.
ಈ ವರ್ಷ ಜನವರಿ ಮತ್ತು ಫೆಬ್ರವರಿಯಲ್ಲಿ ಚೀನಾದ ಜಾಗತಿಕ ವ್ಯಾಪಾರ ಹೆಚ್ಚುವರಿ 103.3 ಬಿಲಿಯನ್ ಡಾಲರ್ ಆಗಿದ್ದು, ಕಳೆದ ವರ್ಷದ ಇದೇ ಅವಧಿಯಲ್ಲಿ 7.1 ಬಿಲಿಯನ್ ಯುಎಸ್ಡಿ ಇಳಿಕೆಯಾಗಿತ್ತು.