ಬೀಜಿಂಗ್: ಅಂತಾರಾಷ್ಟ್ರೀಯ ಸಮುದಾಯದ ಮುಂದೆ ಚೀನಾದ ಪರಿಸ್ಥಿತಿ ಸಂಕೀರ್ಣವಾಗಿದೆ. ಚೀನಿಯರು ಕಠಿಣ ಪರಿಸ್ಥಿತಿ ಎದುರಿಸಲು ಸನ್ನದ್ಧರಾಗಬೇಕು. ಕಷ್ಟದ ದಿನಗಳನ್ನು ಸವಾಲಿನಿಂದ ಎದರಿಸಬೇಕಿದ ಎಂದು ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಕರೆ ನೀಡಿದ್ದಾರೆ.
ಚೀನಾದ ಕಮ್ಯೂನಿಸ್ಟ್ ಕ್ರಾಂತಿಯ ತೊಟ್ಟಿಲಾದ ಜಿಯಾಂಗ್ಸಿನ ದಕ್ಷಿಣ ಪ್ರಾಂತ್ಯದಲ್ಲಿ ಮಾತನಾಡಿದ ಅವರು, ಕಷ್ಟದ ಸಂದರ್ಭಗಳನ್ನು ಎದುರಿಸಲು ನಾವು ಸಿದ್ಧರಾಗಿರಬೇಕು. ವಾಷಿಂಗ್ಟನ್ನ ಸುಂಕ ಏರಿಕೆ ನೀತಿ ಕಹಿಯಾದ ವ್ಯಾಪಾರ ಯುದ್ಧಕ್ಕೆ ನೂಕಿದೆ ಎಂದು ನಿರಾಸೆ ವ್ಯಕ್ತಪಡಿಸಿದ್ದಾರೆ.
ವಿಶ್ವದ ಬೃಹತ್ ಆರ್ಥಿಕತೆ ಹೊಂದಿರುವ ಚೀನಾ- ಅಮೆರಿಕ ನಡುವಿನ ವಾಣಿಜ್ಯ ಮಾತುಕತೆ ಮುರಿದು ಬಿದ್ದು, ಉಭಯ ರಾಷ್ಟ್ರಗಳು ಆಮದು ಸರಕುಗಳ ಮೇಲೆ ಸುಂಕ ಹೇರಿಕೊಂಡಿವೆ. ಕಳೆದ ವಾರ ವಾಷಿಂಗ್ಟನ್, ಚೀನಾ ಟೆಲಿಕಾಂ ಸಲಕರಣೆ ಕಂಪನಿಯಾದ 'ಹುವಾಯ್ ಟೆಕ್ನಾಲಜೀಸ್ ಲಿಮಿಟೆಡ್ ಕಂಪನಿ'ಯನ್ನು ಕಪ್ಪುಪಟ್ಟಿಗೆ ಸೇರಿಸಿದೆ. ಇದರಿಂದ ತಂತ್ರಜ್ಞಾನ ಸಲಕರಣೆಗಳ ಪೂರೈಕೆ ಹಾಗೂ ಹೂಡಿಕೆದಾರರ ಮೇಲೆ ಬಲವಾದ ಪೆಟ್ಟು ನೀಡಿದಂತ್ತಾಗಿದೆ.
"ಪ್ರಸ್ತುತ ಹೊಸ ಲಾಂಗ್ ಮಾರ್ಚಿನಲ್ಲಿ ದೇಶಿಯ ಹಾಗೂ ಹೊರ ರಾಷ್ಟ್ರಗಳಿಂದ ಅಪಾಯದ ಮತ್ತು ಕಠಿಣ ಸವಾಲುಗಳನ್ನು ಎದುರಿಸಬೇಕಿದೆ. ಚೀನಿ ಗುಣಲಕ್ಷಣದ ಮುಖೇನ ಸಮಾಜವಾದಕ್ಕೆ ನವೀನ ವಿಜಯ ತರಲು ಹೋರಾಡಬೇಕಿದೆ. ನಮ್ಮ ಒಳ- ಹೊರಗೂ ಪ್ರತಿಕೂಲವಾದ ವಾತಾವರಣ ನಿರ್ಮಾಣವಾಗಿದೆ. ಅಂತಾರಾಷ್ಟ್ರೀಯ ಸಮುದಾಯ ದಿನೇ ದಿನೆ ಸಂಕೀರ್ಣವಾಗುತ್ತಾ ಸಾಗುತ್ತಿದೆ. ಮುಂದೆ ಬರಲಿರುವ ಸಂಕಷ್ಟಗಳಿಗೆ ಇಂದಿನಿಂದಲೇ ಸೂಕ್ತವಾಗಿ ಸನ್ನದ್ಧರಾಗಬೇಕಿದೆ ಎಂದು ಜಿನ್‌ಪಿಂಗ್ ಎಚ್ಚರಿಸಿದ್ದಾರೆ.