ಬೀಜಿಂಗ್: ತಂಪಾದ ಹವಾಮಾನದಿಂದ ಹಲವು ಸಾಗರೋತ್ತರ ದೇಶಗಳಲ್ಲಿ ಕೊರೊನಾ ಹೊಸ ಅಲೆ ಏಳುತ್ತಿದೆ. ಹೀಗಾಗಿ ಆಮದು ಮಾಡಿಕೊಂಡ ಆಹಾರ ಪದಾರ್ಥಗಳ ಪೊಟ್ಟಣಗಳ ಕೊರೊನಾ ವೈರಸ್ ತಪಾಸಣೆಯನ್ನು ಚುರುಕುಗೊಳಿಸುತ್ತಿರುವುದಾಗಿ ಚೀನಾದ ಅಧಿಕಾರಿಗಳು ತಿಳಿಸಿದ್ದಾರೆ.
ಪ್ಯಾಕ್ ಮಾಡಿದ ಆಹಾರ ವೈರಸ್ ಹರಡುವಿಕೆಯಿಂದ ಹೊರತಾಗಿಲ್ಲ ಎಂದು ನ್ಯಾಷನಲ್ ಫುಡ್ ಸೇಫ್ಟಿ ರಿಸ್ಕ್ ಅಸೆಸ್ಮೆಂಟ್ ಸೆಂಟರ್ ಉಪ ನಿರ್ದೇಶಕಿ ಲಿ ನಿಂಗ್ ತಿಳಿಸಿದ್ದಾರೆ. ಆಹಾರ ಪದಾರ್ಥಗಳ ಪೊಟ್ಟಣಗಳಲ್ಲಿ ಕೊರೊನಾ ವೈರಸ್ ಪರೀಕ್ಷೆಯನ್ನು 10 ಸಾವಿರಕ್ಕೆ ಕೇವಲ 0.48ರಷ್ಟು ಮಾತ್ರ ಮಾಡಲಾಗುತ್ತಿದೆ. ಇದನ್ನು ಹೆಚ್ಚಿಸಲಾಗುವುದು ಎಂದು ಅವರು ಹೇಳಿದ್ದಾರೆ. ಮನುಷ್ಯನಿಂದ ಪ್ಯಾಕ್ ಮಾಡಿದ ಆಹಾರದ ಮೇಲೆ ಸ್ವಲ್ಪ ಮಟ್ಟಿಗೆ ವೈರಸ್ ಹರಡಬಹುದು ಎಂದು ಲಿ ನಿಂಗ್ ತಿಳಿಸಿದ್ದಾರೆ. ಆದರೆ ಈ ರೀತಿ ವೈರಸ್ ಹಬ್ಬಿದ ಪ್ರಕರಣಗಳ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.
ಪ್ಯಾಕಿಂಗ್ ಆಹಾರದ ಕೊರೊನಾ ಪರೀಕ್ಷೆಯನ್ನು ಕೆಲ ಆಹಾರ ಪದಾರ್ಥ ರಫ್ತುದಾರರು ವಿರೋಧಿಸಿದ್ದು, ಇದರ ಹಿಂದಿನ ವೈಜ್ಞಾನಿಕ ಕಾರಣ ತಿಳಿಸುವಂತೆ ಹೇಳಿದ್ದಾರೆ. ಆದರೆ ಇದು ವೈರಸ್ ಹರಡುವುದನ್ನು ತಡೆಗಟ್ಟುವ ಮುಂದುವರೆದ ಕ್ರಮ ಎಂದು ಚೀನಾ ಸಮರ್ಥಿಸಿಕೊಂಡಿದೆ.