ಬೀಜಿಂಗ್ (ಚೀನಾ): ಚಂದ್ರನ ಮೇಲ್ಮೈಯಲ್ಲಿನ ಕಲ್ಲು ತರಲು ಚೀನಾ ಉಡಾವಣೆ ಮಾಡಿದ್ದ ಚಾಂಗ್ ಇ-5 ನೌಕೆ ಯಶಸ್ವಿಯಾಗಿ ತಲುಪಿದೆ ಎಂದು ಚೀನಾ ತಿಳಿಸಿದೆ. ಅಲ್ಲದೆ ಚಂದ್ರನ ಮೇಲೆ ಇಳಿದಿರುವ ನೌಕೆಯು ಮೊದಲ ಮಾದರಿಯನ್ನು ಭೂಮಿಗೆ ಕಳುಹಿಸಿದೆ ಎಂದಿದೆ.
ಈ ಮೂಲಕ ಬೀಜಿಂಗ್ ತನ್ನ ಮಾನವರಹಿತ ಗಗನಯಾತ್ರೆಯ ಮಹಾತ್ವಾಕಾಂಕ್ಷೆಯ ಯೋಜನೆ ಯಶಸ್ವಿಗೊಳಿಸಿದ ಕೀರ್ತಿ ಪಡೆದುಕೊಂಡಿದೆ. ಚಂದ್ರನ ಮೇಲ್ಮೈ ತಲುಪಿದ ಚಾಂಗ್ ಚಂದ್ರನ ಮಾದರಿ ಸಂಗ್ರಹಿಸಿದೆ.
ನವೆಂಬರ್ 24 ರಂದು ಇಲ್ಲಿನ ವೆನ್‌ಚಾಂಗ್ ಬಾಹ್ಯಾಕಾಶ ಕೇಂದ್ರದಿಂದ ನೌಕೆಯನ್ನು ಉಡಾವಣೆ ಮಾಡಲಾಗಿತ್ತು. ಚಾಂಗ್ ಇ-5 ಚೀನಾದ ಏರೋಸ್ಪೇಸ್ ಇತಿಹಾಸದಲ್ಲಿ ಅತ್ಯಂತ ಸಂಕೀರ್ಣ ಮತ್ತು ಸವಾಲಿನ ಕಾರ್ಯಾಚರಣೆಗಳಲ್ಲಿ ಒಂದಾಗಿದೆ. ಕಳೆದ 40 ವರ್ಷಗಳ ನಂತರ ಚಂದ್ರನ ಮೇಲ್ಮೈಯಿಂದ ಮಾದರಿಗಳನ್ನು ಸಂಗ್ರಹಿಸಿ ಭೂಮಿಗೆ ತರುವ ಮೊದಲ ಪ್ರಯತ್ನ ಇದಾಗಿದೆ.
ಲ್ಯಾಂಡರ್ ಚಂದ್ರನ ಮೇಲ್ಮೈ ಕೊರೆಯಲು ಮತ್ತು 2 ಕಿಲೋಗ್ರಾಂಗಳಷ್ಟು (4.4 ಪೌಂಡ್) ಕಲ್ಲುಗಳು ಮತ್ತು ಭಗ್ನಾವಶೇಷಗಳನ್ನು ಸಂಗ್ರಹಿಸಲು ಯೋಜನೆ ರೂಪಿಸಲಾಗಿದೆ.
48 ಗಂಟೆಗಳಲ್ಲಿ, ಚಂದ್ರನ ಮೇಲ್ಮೈಯಲ್ಲಿ ಕಲ್ಲುಗಳು ಮತ್ತು ಚಂದ್ರನಲ್ಲಿರುವ ಮಣ್ಣನ್ನು ತೆಗೆಯಲು ರೊಬೊಟಿಕ್ ತನ್ನ ರೆಕ್ಕೆಗಳನ್ನು ವಿಸ್ತರಿಸುತ್ತದೆ ಮತ್ತು ಚಂದ್ರನ ಮೇಲ್ಮೈನ ಸುಮಾರು 2 ಕೆ.ಜಿ.ಕಲ್ಲು ಮತ್ತು ಮಣ್ಣು ಸಂಗ್ರಹಿಸಿ ಗಗನನೌಕೆಯ ಕಂಟೈನರ್ನಲ್ಲಿ ಹಾಕಿ ಚಾಂಗ್ ಇ-5 ಪ್ರೋಬ್ ಹೊತ್ತು ತರಲಿದೆ ಎಂದು ನಿರೀಕ್ಷಿಸಲಾಗಿದೆ.
1970 ರ ದಶಕದಲ್ಲಿ ಸೋವಿಯತ್ ನಡೆಸಿದ ನೌಕಾಯಾನದ ಬಳಿಕ ಚಂದ್ರನಿಂದ ಕಲ್ಲು ಹೊತ್ತು ತಂದ ಕಾರ್ಯಾಚರಣೆ ಇದಾಗಿರಲಿದೆ. ಈ ನೌಕೆ ಯಶಸ್ವಿಯಾಗಿ ಚಂದ್ರನನ್ನು ತಲುಪುತ್ತಿದ್ದಂತೆ ರಷ್ಯಾ ಹಾಗೂ ಅಮೆರಿಕಾ ಬಾಹ್ಯಾಕಾಶ ಸಂಸ್ಥೆಗಳು ಚೀನಾಗೆ ಅಭಿನಂದನೆ ಸಲ್ಲಿಸಿವೆ.