ಬೀಜಿಂಗ್: ಚೀನಾದಲ್ಲಿ ಮತ್ತೆ ಮೂರು ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 83,030 ಕ್ಕೆ ತಲುಪಿದೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ.
ಎನ್‌ಎಚ್‌ಸಿ ಪ್ರಕಾರ, ಗುವಾಂಗ್‌ಡಾಂಗ್ ಪ್ರಾಂತ್ಯದಲ್ಲಿ ಶುಕ್ರವಾರ ಮೂರು ಪ್ರಕರಣಗಳು ವರದಿಯಾಗಿದ್ದು, ಎರಡು ಕೊರೊನಾ ಲಕ್ಷಣ ರಹಿತ ಪ್ರಕರಣಗಳು ದಾಖಲಾಗಿವೆ ಎಂದು ವರದಿ ಮಾಡಿದೆ.
ಇನ್ನು ವುಹಾನ್‌ನಲ್ಲಿಯೂ ಸಹ ಕೊರೊನಾ ಲಕ್ಷಣ ರಹಿತ 257 ಪ್ರಕರಣಗಳು ದಾಖಲಾಗಿದ್ದು, ಈ ಬಗ್ಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಆಯೋಗ ಹೇಳಿದೆ. ಈ ರೋಗಿಗಳನ್ನು ಕೊರೊನಾ ವೈರಸ್ ಪರೀಕ್ಷೆಗೆ ಒಳಪಡಿಸಿದರೂ ಸಹ ಜ್ವರ, ಕೆಮ್ಮು ಅಥವಾ ಗಂಟಲು ನೋವಿನಂತಹ ಯಾವುದೇ ರೋಗ ಲಕ್ಷಣಗಳು ಕಂಡು ಬಂದಿಲ್ಲ. ಕೊರೊನಾ ವೈರಸ್ ಕೂಡ ಈ ಗುಣ ಲಕ್ಷಣವನ್ನೇ ಹೊಂದಿದ್ದು, ಇದು ವೈದ್ಯರಿಗೆ ತಲೆನೋವಾಗಿ ಪರಿಣಮಿಸಿದೆ ಎಂದು ಆಯೋಗ ಹೇಳಿದೆ.
ಒಟ್ಟಾರೆ 83,030 ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು, 67 ರೋಗಿಗಳು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು 4,634 ಜನರು ಈ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಿದೆ.