ಬೀಜಿಂಗ್(ಚೀನಾ): ಗಡಿ ವಿಚಾರವಾಗಿ ಮೇಲಿಂದ ಮೇಲೆ ಕಾಲು ಕೆದರಿ ಜಗಳಕ್ಕೆ ಬರುವ ಚೀನಾ ಇದೀಗ ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ನೆರವು ನೀಡುವುದಾಗಿ ಹೇಳಿದೆ.
ಭಾರತದಲ್ಲಿ ಎರಡನೇ ಹಂತದ ಕೋವಿಡ್ ಅಲೆ ಜೋರಾಗಿದ್ದು, ಪ್ರತಿದಿನ ಲಕ್ಷಾಂತರ ಸೋಂಕಿನ ಪ್ರಕರಣಗಳು ದಾಖಲಾಗುತ್ತಿವೆ. ಹೀಗಾಗಿ ಭಾರತಕ್ಕೆ ಈ ವಿಷಯದಲ್ಲಿ ಅಗತ್ಯ ನೆರವು ಹಾಗೂ ಬೆಂಬಲ ನೀಡುವುದಾಗಿ ಚೀನಾ ತಿಳಿಸಿದೆ. ಮಾಧ್ಯಮಗೋಷ್ಟಿಯಲ್ಲಿ ಈ ಕುರಿತು ಮಾತನಾಡಿರುವ ಅಲ್ಲಿನ ಸಚಿವಾಲಯದ ವಕ್ತಾರ ವಾಂಗ್ ವೆನ್ಬಿನ್, ಕೊರೊನಾ ವೈರಸ್ ಬಿಕ್ಕಟ್ಟು ನಿಯಂತ್ರಣದಲ್ಲಿಡಲು ಭಾರತಕ್ಕೆ ಅಗತ್ಯವಾದ ಬೆಂಬಲ ಮತ್ತು ಸಹಾಯ ನೀಡಲು ಚೀನಾ ಸಿದ್ಧವಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ಕ್ಷಮಿಸಿ, ಕೊರೊನಾ ವ್ಯಾಕ್ಸಿನ್ ಎಂದು ಗೊತ್ತಿರಲಿಲ್ಲ, ಕದ್ದ ಕೋವಿಡ್ ಲಸಿಕೆ ಮರಳಿ ತಂದಿಟ್ಟ ಕಳ್ಳ!
ಭಾರತದಲ್ಲಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿದೆ ಎಂದು ಮಾಧ್ಯಮದವರು ಕೇಳಿರುವ ಪ್ರಶ್ನೆಗೆ ಉತ್ತರಿಸಿದ ಅವರು, ಕೋವಿಡ್ ಸಾಂಕ್ರಾಮಿಕ ಎಲ್ಲ ಮಾನವಕುಲದ ಸಾಮಾನ್ಯ ಶತ್ರುವಾಗಿದ್ದು, ಅಂತಾರಾಷ್ಟ್ರೀಯ ಒಗ್ಗಟ್ಟು ಮತ್ತು ಪರಸ್ಪರ ಸಹಾಯದ ಮೂಲಕ ಅದರ ವಿರುದ್ಧ ಹೋರಾಟ ನಡೆಸಬೇಕಾಗಿದೆ ಎಂದು ತಿಳಿಸಿದರು.
ವೈದ್ಯಕೀಯ ಸೌಕರ್ಯಗಳ ಕೊರತೆಯಿಂದಾಗಿ ಭಾರತ ಇತ್ತೀಚಿನ ದಿನಗಳಲ್ಲಿ ಗಂಭೀರ ಪರಿಸ್ಥಿತಿ ಎದುರಿಸುತ್ತಿದ್ದು, ಇದನ್ನ ಚೀನಾ ಗಮನಿಸುತ್ತಿದೆ ಎಂದಿದ್ದಾರೆ.
2019ರಲ್ಲಿ ಚೀನಾದ ವುಹಾನ್ ಪ್ರಾಂತ್ಯದಲ್ಲಿ ಮಾಹಾಮಾರಿ ಕೊರೊನಾ ಉಲ್ಭಣಗೊಂಡಿದ್ದ ಸಮಯದಲ್ಲಿ ಭಾರತವು ಚೀನಾಕ್ಕೆ ವೈದ್ಯಕೀಯ ಪರಿಕರ ಕಳುಹಿಸಿ ಸಹಾಯ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.