ಬೀಜಿಂಗ್(ಚೀನಾ): ಸತತ 73 ದಿನಗಳ ಲಾಕ್‌ಡೌನ್ ನಿರ್ಬಂಧವನ್ನು ಚೀನಾ ತೆಗೆದುಹಾಕಿದೆ. ಆದ್ದರಿಂದ ಕೊರೊನಾ ವೈರಸ್ನ ಕೇಂದ್ರಬಿಂದುವಾಗಿರುವ ವುಹಾನ್‌ನಲ್ಲಿ ಸಾವಿರಾರು ಜನರು ಈ ಬೃಹತ್ ನಗರದಿಂದ ವಿವಿಧೆಡೆ ಪ್ರಯಾಣಿಸಲು ಪ್ರಾರಂಭಿಸಿದ್ದಾರೆ. ಇದು ಮತ್ತೆ ಸೋಂಕು ಹೆಚ್ಚಾಗುವ ಭೀತಿ ಮೂಡಿಸಿದೆ.
ಲಾಕ್‌ಡೌನ್ ತೆಗೆಯುತ್ತಿದ್ದಂತೆ, ದೇಶದಲ್ಲಿ ಹೊಸ ಕೊರೊನಾ ಪ್ರಕರಣಗಳ ಸಂಖ್ಯೆ 1,000 ದಾಟಿದೆ. ನಿನ್ನೆ ಮತ್ತಿಬ್ಬರು ಸಾವನ್ನಪ್ಪಿರುವುದು ಸೋಂಕು ಮರುಕಳಿಸುವ ಆತಂಕ ಹೆಚ್ಚಿಸಿದೆ.
ವುಹಾನ್ ಪ್ರಾಂತ್ಯದಲ್ಲಿ ಮಂಗಳವಾರ 62 ಹೊಸ ಪ್ರಕರಣಗಳು ವರದಿಯಾಗಿವೆ ಎಂದು ಚೀನಾದ ಆರೋಗ್ಯ ಪ್ರಾಧಿಕಾರ ಬುಧವಾರ ತಿಳಿಸಿದೆ. ಇದರಲ್ಲಿ ವಿದೇಶದಿಂದ ಹಿಂದಿರುಗಿದ 59 ಪ್ರಕರಣಗಳೂ ಸೇರಿದಂತೆ ಒಟ್ಟು 1,042 ವಿದೇಶಿಗರಿಗೆ ಸೋಂಕು ತಗುಲಿದೆ. ಶಾಂಡೊಂಗ್ ಪ್ರಾಂತ್ಯದಲ್ಲಿ ಎರಡು ಮತ್ತು ಗುವಾಂಗ್‌ಡಾಂಗ್ ಪ್ರಾಂತ್ಯದಲ್ಲಿ ಒಂದು ಸೇರಿದಂತೆ ಮೂರು ಹೊಸ ದೇಶೀಯ ಪ್ರಕರಣಗಳು ವರದಿಯಾಗಿವೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ (ಎನ್‌ಎಚ್‌ಸಿ) ತಿಳಿಸಿದೆ.
ಮಂಗಳವಾರವೂ 137 ಹೊಸ ಲಕ್ಷಣರಹಿತ ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, ಒಟ್ಟು 1,095 ಲಕ್ಷಣರಹಿತ ಪ್ರಕರಣಗಳು ಇನ್ನೂ ವೈದ್ಯಕೀಯ ವೀಕ್ಷಣೆಯಲ್ಲಿವೆ ಎಂದು NHC ತಿಳಿಸಿದೆ.
ಸೋಂಕಿನಿಂದ ಮಂಗಳವಾರ ಇಬ್ಬರು ಸಾವನ್ನಪ್ಪಿದ್ದು, ಒಂದು ಶಾಂಘೈ ಹಾಗೂ ಮತ್ತೊಂದು ಹುಬೈ ಪ್ರಾಂತ್ಯದಲ್ಲಿ ದಾಖಲಾಗಿದೆ. ಈವರೆಗೆ ದೇಶದಲ್ಲಿ ಒಟ್ಟಾರೆ ಸಾವಿನ ಸಂಖ್ಯೆ 3,333 ಕ್ಕೆ ತಲುಪಿದೆ. ದೇಶದ ಒಟ್ಟು ಸೋಂಕಿತರ ಸಂಖ್ಯೆ 81,802 ಕ್ಕೆ ತಲುಪಿದ್ದು, 1,190 ರೋಗಿಗಳು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದಂತೆ 77,279 ರೋಗಿಗಳು ಚೇತರಿಸಿಕೊಂಡ ನಂತರ ಬಿಡುಗಡೆಯಾಗಿದ್ದಾರೆ.
ಸದ್ಯ ಲಾಕ್‌ಡೌನ್ ತೆಗೆದುಹಾಕಿದ ಬಳಿಕ ಮತ್ತೆ ಸೋಂಕಿತರ ಪ್ರಕರಣ ಹೆಚ್ಚಾಗುವ ಭೀತಿ ಶುರುವಾಗಿದ್ದು, ಸರ್ಕಾರ ಹಾಗೂ ಜನತೆ ಎಚ್ಚೆತ್ತುಕೊಳ್ಳಬೇಕಿದೆ.