ಬೀಜಿಂಗ್: ಚೀನಾದ ರಾಜಧಾನಿ ಬೀಜಿಂಗ್ನಲ್ಲಿ ಮನುಷ್ಯನಲ್ಲಿ ಮೊದಲ ಬಾರಿಗೆ 'ಮಂಕಿ ಬಿ ವೈರಸ್' ಎಂಬ ಸೋಂಕು ದೃಢಪಟ್ಟಿದೆ. ಪರಿಣಾಮ, ಪಶುವೈದ್ಯರೊಬ್ಬರು ಈ ಸೋಂಕಿಗೆ ಬಲಿಯಾಗಿದ್ದಾರೆ.
ಆದರೆ ಈ ವೈದ್ಯರ ಆಪ್ತ ಸಂಪರ್ಕ ಹೊಂದಿರುವವರಲ್ಲಿ ಯಾವುದೇ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿಲ್ಲ. ಅವರ ಸಂಪರ್ಕಿತರೆಲ್ಲರೂ ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ.
ಮಾನವರಲ್ಲದ ಸಸ್ತನಿಗಳ ಬಗ್ಗೆ ಸಂಶೋಧನೆ ನಡೆಸುವ ಸಂಸ್ಥೆಯಲ್ಲಿ ಕೆಲಸ ಮಾಡುವ 53 ವರ್ಷದ ಪಶುವೈದ್ಯರೊಬ್ಬರು ವಾಂತಿಯ ಆರಂಭಿಕ ಲಕ್ಷಣಗಳೊಂದಿಗೆ ಸೋಂಕಿಗೆ ಒಳಗಾಗಿದ್ದರು. ಪ್ರಾಣಿಗಳ ಬಗ್ಗೆ ಅಧ್ಯಯನ ಮಾಡುತ್ತಿದ್ದ ಪಶು ವೈದ್ಯರಿಗೆ ಏಪ್ರಿಲ್ ತಿಂಗಳಲ್ಲೇ ಸೋಂಕು ತಗುಲಿತ್ತು. ಎರಡು ಮೃತ ಮಂಗಗಳ ಶಸ್ತ್ರಚಿಕಿತ್ಸೆ ಮಾಡಿದ್ದ ಅವರಿಗೆ ಕೆಲವೇ ದಿನಗಳಲ್ಲಿ ವಾಂತಿಯಂತಹ ಪ್ರಾರಂಭಿಕ ರೋಗ ಲಕ್ಷಣಗಳು ಕಾಣಿಸಿಕೊಂಡಿದ್ದವು.
ಇದರಿಂದ ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ಮಂಕಿ ಬಿ ವೈರಸ್ ಸೋಂಕು ತಗುಲಿರುವುದು ದೃಢವಾಗಿತ್ತು. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದರೂ, ಅವರು ಮೇ 27ರಂದು ಬಲಿಯಾದರು. ಈ ವಿಚಾರ ಚೀನಾದ ಸಿಡಿಸಿ ಪತ್ರಿಕೆಯಲ್ಲಿ ಜುಲೈ 17ರಂದು ಪ್ರಕಟವಾಗಿದೆ.
ಸಂಶೋಧಕರು ಏಪ್ರಿಲ್‌ನಲ್ಲಿ ಪಶುವೈದ್ಯರ ಸೆರೆಬ್ರೊಸ್ಪೈನಲ್ ದ್ರವವನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿದಾಗ, ಮಂಕಿ ಬಿ ವೈರಸ್ ಧನಾತ್ಮಕವಾಗಿತ್ತು. ಆದರೆ ಅವರ ನಿಕಟ ಸಂಪರ್ಕಿತರ ಮಾದರಿಗಳ ಫಲಿತಾಂಶ ನಕಾರಾತ್ಮಕವಾಗಿತ್ತು.
1932ರಲ್ಲಿ ಅಂದರೆ 89 ವರ್ಷಗಳ ಹಿಂದೆ ಮಂಕಿ ಬಿ ವೈರಸ್ ಕಾಣಿಸಿಕೊಂಡಿತ್ತು. ಆದರೆ ಚೀನಾದಲ್ಲಿ ಇದೇ ಮೊದಲ ಬಾರಿಗೆ ಈ ಸೋಂಕು ಕಾಣಿಸಿಕೊಂಡಿದೆ. ಸೋಂಕಿಗೆ ತುತ್ತಾದ ಮೊದಲನೇ ವ್ಯಕ್ತಿಯೇ ಸಾವನ್ನಪ್ಪಿದ್ದಾರೆ.