ಬೀಜಿಂಗ್: ಭಾರತದಿಂದ ತಮ್ಮ ಪ್ರಜೆಗಳನ್ನು ವಾಪಸ್ ಕರೆಸಿಕೊಳ್ಳುತ್ತಿರುವುದು ಸಾಮಾನ್ಯ ಪ್ರಕ್ರಿಯೆ. ಇದನ್ನು ಗಡಿಯಲ್ಲಿ ಉಂಟಾಗಿರುವ ಆತಂಕಕ್ಕೆ ಹೋಲಿಸಬೇಡಿ ಎಂದು ಕಮ್ಯೂನಿಸ್ಟ್ ಪಕ್ಷದ ಅಧಿಕೃತಕ ಸುದ್ದಿ ಸಂಸ್ಥೆ ಗ್ಲೋಬಲ್ ಟೈಮ್ಸ್ ಹೇಳಿದೆ.
ಭಾರತ ಮತ್ತು ಚೀನಾದ ಗಡಿಯಲ್ಲಿನ ಆತಂಕದಿಂದ ತಮ್ಮ ಪ್ರಜೆಗಳನ್ನು ವಾಪಸ್ ಕೆರೆಸಿಕೊಳ್ಳುತ್ತಿದೆ ಎಂಬುದು ಮಾಧ್ಯಮಗಳ ಊಹಾಪೋಹವಷ್ಟೇ ಎಂದು ಸ್ಪಷ್ಟಪಡಿಸಿದೆ.
ದೇಶವನ್ನು ಪ್ರತಿನಿಧಿಸುವ ರಾಯಭಾರಿ ಅಧಿಕಾರಿಗಳು ತಮ್ಮ ಪ್ರಜೆಗಳಿಗಾಗಿ ರೂಪಿಸುವ ಯೋಜನೆಗಳನ್ನು ಸಾಮಾನ್ಯ ರೀತಿಯಲ್ಲಿ ನೋಡಬೇಕು. ಆದರೆ, ಭಾರತದ ಕೆಲ ಮಾಧ್ಯಮಗಳು ಸಾಮಾನ್ಯ ಪ್ರಕ್ರಿಯೆಗಳಿಗೆ ಭಾರತ ಮತ್ತು ಚೀನಾದ ಗಡಿಯಲ್ಲಿ ಉಂಟಾಗಿರುವ ಆತಂಕದ ಪರಿಸ್ಥಿತಿಗೆ ಹೋಲಿಕೆ ಮಾಡಿವೆ. ಇದು ಗಡಿ ವಿವಾದಗಳ ಉಲ್ಬಣಕ್ಕೆ ಚೀನಾ ತಯಾರಿ ನಡೆಸಬಹುದು ಎಂಬ ಬೇಜವಾಬ್ದಾರಿ ಊಹಾಪೋಹಗಳಿಗೆ ಎಡೆಮಾಡಿಕೊಡುತ್ತದೆ ಎಂದು ಚೀನಾ ಪತ್ರಿಕೆ ಬರೆದುಕೊಂಡಿದೆ.
ಸ್ವದೇಶಕ್ಕೆ ಮರಳಲು ಭಾರತದಲ್ಲಿರುವ ಪ್ರಜೆಗಳಿಗಾಗಿ ವಿಶೇಷ ವಿಮಾನದ ಸೌಲಭ್ಯ ಕಲ್ಪಿಸಲಾಗಿದೆ ಎಂದು ದೆಹಲಿಯಲ್ಲಿರುವ ಚೀನಾ ರಾಯಭಾರಿ ಕಚೇರಿ ನಿನ್ನೆಯಷ್ಟೇ ತುರ್ತು ನೋಟಿಸ್ ಹೊರಡಿಸಿತ್ತು.
ಭಾರತದ ಪೂರ್ವ ಮತ್ತು ಉತ್ತರ ಭಾಗದಲ್ಲಿ ಕೋವಿಡ್-19 ಪ್ರಕರಣಗಳ ಹೆಚ್ಚಳ ಮತ್ತು ಗಡಿಯಲ್ಲಿನ ಆತಂಕದ ಪರಿಸ್ಥಿತಿ ಬೆನ್ನಲ್ಲೇ ಚೀನಾ ತನ್ನ ಪ್ರಜೆಗಳನ್ನು ಸ್ವದೇಶಕ್ಕೆ ಕರೆಸಿಕೊಳ್ಳಲು ಮುಂದಾಗಿದೆ.