ನವದೆಹಲಿ : ಭಾರತದೊಂದಿಗೆ ಒಂದು ಕಡೆ ಶಾಂತಿ ಮಂತ್ರ ಜಪಿಸುತ್ತಿರುವ ಡ್ರ್ಯಾಗನ್ ದೇಶ ಚೀನಾ, ತನ್ನ ಕುತಂತ್ರ ಬುದ್ಧಿಯನ್ನು ಮುಂದುವರಿಸಿದೆ. ವಾಸ್ತವ ಗಡಿ ರೇಖೆಯ ಮಾರ್ಗದಲ್ಲಿ ಯುದ್ಧ ವಿಮಾನ ಕಾರ್ಯಾಚರಣೆಗೆ ಇರುವ ಅಡೆತಡೆಗಳನ್ನು ತೆಗೆದು ಹಾಕಲು ಪ್ರಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ಪೂರ್ವ ಲಡಾಖ್ ಬಳಿಯ ಕ್ಸಿನ್‌ಜಿಯಾಂಗ್ ಪ್ರಾಂತ್ಯದ ಶಾಕ್ಸಿ ನಗರದಲ್ಲಿ ಯುದ್ಧ ಕಾರ್ಯಾಚರಣೆಗಾಗಿ ಹೊಸ ವಾಯುನೆಲೆ ಅಭಿವೃದ್ಧಿ ಪಡಿಸುತ್ತಿದೆ.
ಭಾರತದ ಗಡಿಯಲ್ಲಿ ಯುದ್ಧ ವಿಮಾನ ಕಾರ್ಯಾಚರಣೆಗಾಗಿ ಕಾಶ್ಗರ್, ಹೊಗನ್ ವಾಯುನೆಲೆಗಳ ನಡುವೆ ಚೀನಾ ಹೊಸದಾಗಿ ಸೇನಾ ನೆಲೆ ಸ್ಥಾಪಿಸುತ್ತಿದೆ. ಈ ಹೊಸ ವಾಯುನೆಲೆಯೊಂದಿಗೆ, ಚೀನಾದ ವಾಯುಪಡೆಯು ಈ ಪ್ರದೇಶದಲ್ಲಿ ಅಸ್ತಿತ್ವದಲ್ಲಿರುವ ನಿರ್ಬಂಧಗಳನ್ನು ಮೀರುವ ಸಾಮರ್ಥ್ಯ ಹೊಂದಿದೆ. ಇದನ್ನು ಯುದ್ಧ ವಿಮಾನ ಕಾರ್ಯಾಚರಣೆಗಾಗಿ ನವೀಕರಿಸಲಾಗುತ್ತಿದೆ ಮತ್ತು ಶೀಘ್ರದಲ್ಲೇ ಲಭ್ಯವಾಗುವಂತೆ ಕೆಲಸ ನಡೆಯುತ್ತಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಪ್ರಸ್ತುತ ಚೀನಾದಲ್ಲಿರುವ ಯುದ್ಧ ವಿಮಾನ ವಾಯುನೆಲೆ ಹಾಗೂ ಎಲ್‌ಎಸಿ ನಡುವಿನ ಅಂತರ ಸುಮಾರು 400 ಕಿಲೋಮೀಟರ್. ವಾಯು ನೆಲೆ ಸ್ಥಾಪಿಸುವ ಮೂಲಕ ಫೈಟರ್ ಜೆಟ್‌ಗಳ ಕಾರ್ಯಾಚರಣೆಗೆ ಇರುವ ಅಡೆತಡೆಗಳನ್ನು ದೂರ ಮಾಡುತ್ತಿದೆ.
ಉತ್ತರಾಖಂಡ್‌ನ ಗಡಿ ನಗರವಾದ ಬಾರಹೋತಿ ಬಳಿಯ ಚೀನಾ ವಾಯುನೆಲೆಯನ್ನು ಭಾರತ ಸೂಕ್ಷ್ಮವಾಗಿ ಗಮನಿಸುತ್ತಿದೆ. ಚೀನಾದಿಂದ ಇತ್ತೀಚೆಗೆ ಹಲವಾರು ಮಾನವರಹಿತ ವೈಮಾನಿಕ ವಾಹನಗಳು ಬಂದಿರುವ ಹಿನ್ನೆಲೆ ಈ ಪ್ರದೇಶದಲ್ಲಿ ತೀವ್ರ ನಿಗಾವಹಿಸಲಾಗಿದೆ.
ಇದನ್ನೂ ಓದಿ: ಉತ್ತರ ಸಿಕ್ಕಿಂನಲ್ಲಿ ಮಿಲಿಟರಿ ಕ್ಯಾಂಪ್ ಸ್ಥಾಪಿಸುತ್ತಿದೆ ಚೀನಾ: ಮತ್ತೊಂದು ತಗಾದೆಗೆ ತಯಾರಿ?
ಕೆಲವು ದಿನಗಳ ಹಿಂದಷ್ಟೇ ಹೊಗನ್, ಕಾಶ್ಗರ್ ಮತ್ತು ಗಾರ್ ಗುನ್ಸಾ ವಾಯುನೆಲೆಗಳಲ್ಲಿ ವಾಯು ಸೇನೆಯ ಶಕ್ತಿ ಪ್ರದರ್ಶನ ನೀಡಿತ್ತು. ವಾಯುನೆಲೆಗಳ ವಿಷಯದಲ್ಲಿ ಚೀನಾ ಭಾರತದಷ್ಟು ಪ್ರಬಲವಾಗಿಲ್ಲ. ಫೈಟರ್ ಜೆಟ್‌ಗಳ ನಿಯೋಜನೆಯಲ್ಲಿ ಭಾರತವು ಮುಂಚೂಣಿಯಲ್ಲಿದೆ. ಈ ಹಿನ್ನೆಲೆ ತನ್ನ ಶಕ್ತಿ ಹೆಚ್ಚಿಸಿಕೊಳ್ಳಲು ಚೀನಾ ವಾಸ್ತವ ಗಡಿ ರೇಖೆ ಬಳಿ ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಅನ್ನು ನಿಯೋಜಿಸಿದೆ.