ಮುಲ್ತಾನ್ (ಪಾಕಿಸ್ತಾನ): ಮಧ್ಯ ಪಾಕಿಸ್ತಾನದಲ್ಲಿ ಶಿಯಾ ಮುಸ್ಲಿಮರು ಮೆರವಣಿಗೆ ನಡೆಸುವಾಗ ರಸ್ತೆಬದಿಯಲ್ಲಿ ಬಾಂಬ್ ಸ್ಫೋಟಗೊಂಡಿದ್ದು, ಕನಿಷ್ಠ ಮೂವರು ಸಾವನ್ನಪ್ಪಿದ್ದು, 50 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.
ಇನ್ನು ಸ್ಫೋಟ ಸಂಭವಿಸಿದ ಸ್ಥಳಕ್ಕೆ ಪೊಲೀಸರು ಮತ್ತು ಆ್ಯಂಬುಲೆನ್ಸ್ಗಳು ಧಾವಿಸುತ್ತಿರುವ ವಿಡಿಯೋಗಳು ವೈರಲ್ ಆಗಿವೆ. ಈ ವೇಳೆ ಪೂರ್ವ ಪಂಜಾಬ್ ಪ್ರಾಂತ್ಯದ ಬಹವಾಲ್‌ನಗರದ ದಾರಿಯುದ್ದಕ್ಕೂ ಗಾಯಗೊಂಡ ಜನರು ಸಹಾಯಕ್ಕಾಗಿ ಕಾಯುತ್ತಿರುವುದು ಕಂಡುಬಂದಿದೆ.
ನಗರ ಪೊಲೀಸ್ ಅಧಿಕಾರಿ ಮೊಹಮ್ಮದ್ ಅಸದ್ ಮತ್ತು ಶಿಯಾ ನಾಯಕ ಖವಾರ್ ಶಫ್ಕತ್ ಬಾಂಬ್ ಸ್ಫೋಟವನ್ನು ದೃಢಪಡಿಸಿದ್ದಾರೆ. ನಗರದಲ್ಲಿ ಘಟನೆ ಸಂಬಂದ ಉದ್ವಿಗ್ನತೆ ಹೆಚ್ಚಾಗಿದೆ. ಶಿಯಾಗಳು ದಾಳಿಯನ್ನು ವಿರೋಧಿಸಿದ್ದು, ಪ್ರತೀಕಾರಕ್ಕೆ ಒತ್ತಾಯಿಸಿದ್ದಾರೆ.
ಈ ಮೆರವಣಿಗೆ ಮುಹಾಜಿರ್ ಕಾಲೋನಿ ಎಂದು ಕರೆಯಲ್ಪಡುವ ದಟ್ಟಣೆಯ ಪ್ರದೇಶದಲ್ಲಿ ಹಾದುಹೋಗುವಾಗ ಸ್ಫೋಟ ಸಂಭವಿಸಿದೆ ಎಂದು ಶಫ್ಕತ್ ಹೇಳಿದ್ದಾರೆ. ದಾಳಿಯನ್ನು ಖಂಡಿಸಿದ್ದು, ದೇಶದ ಇತರ ಭಾಗಗಳಲ್ಲಿ ನಡೆಯುತ್ತಿರುವ ಇಂತಹ ಮೆರವಣಿಗೆಗಳಲ್ಲಿ ಭದ್ರತೆಯನ್ನು ಹೆಚ್ಚಿಸಲು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಶಿಯಾ ಅಶೌರಾ ಹಬ್ಬದ ಮುನ್ನ ಒಂದು ದಿನದ ಹಿಂದೆ ದೇಶಾದ್ಯಂತ ಮೊಬೈಲ್ ಫೋನ್ ಸೇವೆಯನ್ನು ಸ್ಥಗಿತಗೊಳಿಸಿದ್ದರಿಂದ ಈ ಪ್ರದೇಶದಲ್ಲಿ ಸಂವಹನ ಕಷ್ಟವಾಗಿತ್ತು. ಇನ್ನು ಈ ವಾರ್ಷಿಕ ಸ್ಮರಣೆಯು 7 ನೇ ಶತಮಾನದ ಪ್ರವಾದಿ ಮುಹಮ್ಮದ್ ಮೊಮ್ಮಗ ಹುಸೇನ್ ಅವರ ಸ್ಮರಿಸುವ ಕಾರ್ಯವಾಗಿದೆ. ಶಿಯಾ ಇಸ್ಲಾಂನ ಅತ್ಯಂತ ಪ್ರೀತಿಯ ಸಂತರಲ್ಲಿ ಇವರೂ ಒಬ್ಬರಾಗಿದ್ದಾರೆ.