ಢಾಕಾ(ಬಾಂಗ್ಲಾದೇಶ): ದುರ್ಗಾಪೂಜೆಯ ಸಂದರ್ಭದಲ್ಲಿ ಪೆಂಡಾಲ್‌ಗಳ ಮೇಲೆ ನಡೆದ ದಾಳಿ ಪೂರ್ವನಿಯೋಜಿತ ಕೃತ್ಯ. ಇಂಥ ಘಟನೆಗಳು ದೇಶದ ಕೋಮು ಸೌಹಾರ್ದತೆಯನ್ನು ಹಾಳು ಮಾಡುವ ಗುರಿ ಹೊಂದಿವೆ ಎಂದು ಗೃಹ ಸಚಿವ ಅಸಾದುಜ್ಜಮನ್ ಖಾನ್ ಪ್ರತಿಕ್ರಿಯಿಸಿದರು.
ಬಾಂಗ್ಲಾದ ಕೊಮಿಲ್ಲಾ ಸೇರಿದಂತೆ ಹಲವೆಡೆ ದುರ್ಗಾಪೂಜೆ ಆಚರಣೆಯ ವೇಳೆ ನೂರಾರು ದುಷ್ಕರ್ಮಿಗಳು ದಾಳಿ ನಡೆಸಿರುವ ಬಗ್ಗೆ ಹಲವು ಪ್ರಕರಣಗಳು ದಾಖಲಾಗಿದ್ದು, ಸಚಿವರು ಈ ಹೇಳಿಕೆ ನೀಡಿದ್ದಾರೆ.
ಮುಸ್ಲಿಮರ ಧಾರ್ಮಿಕ ಗ್ರಂಥಕ್ಕೆ ಅವಮಾನ ಮಾಡಿರುವ ಊಹಾಪೋಹದ ಸುದ್ದಿ ಹರಡಿದ ನಂತರ ಕೊಮಿಲ್ಲಾದಲ್ಲಿ ದುರ್ಗಾ ಪೂಜಾ ಪೆಂಡಾಲ್‌ಗಳು ಹಾಗು ಹಿಂದೂಗಳ ಮೇಲೆ ದುಷ್ಕರ್ಮಿಗಳು ವ್ಯಾಪಕ ದಾಳಿ ನಡೆಸಿದ್ದರು. ಈ ಪ್ರಕರಣಗಳು ಕೋಮು ಸೌಹಾರ್ದತೆಯನ್ನು ಹಾಳು ಮಾಡುವ ಉದ್ದೇಶ ಹೊಂದಿವೆ. ಇದು ಪಟ್ಟಭದ್ರ ಹಿತಾಸಕ್ತಿಗಳ ಗುಂಪುಗಳಿಂದ ಪ್ರಚೋದನೆಗೊಂಡು ನಡೆಸಲಾದ ಕೃತ್ಯಗಳು ಎಂದು ಅವರು ಹೇಳಿದರು.
ಕೊಮಿಲ್ಲಾ ಹಿಂಸಾಚಾರದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು, 'ಈ ಕೃತ್ಯಗಳಲ್ಲಿ ಭಾಗಿಯಾದವರ ಪತ್ತೆ ಹಾಗು ಘಟನೆಗಳ ಬಗ್ಗೆ ನಮಗೆ ಪೂರಕವಾದ ಎಲ್ಲಾ ಸಾಕ್ಷಿಗಳು ದೊರೆತ ನಂತರ ವಿಚಾರಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುತ್ತೇವೆ. ಜೊತೆಗೆ, ಅಪರಾಧಿಗಳನ್ನು ಕಠಿಣ ಶಿಕ್ಷೆಗೆ ಗುರಿಪಡಿಸಲಾಗುವುದು' ಎಂದು ಭರವಸೆ ನೀಡಿದರು.
ಮುಂದುವರೆದು ಮಾತನಾಡಿದ ಸಚಿವರು, 'ಇದು ಕೊಮಿಲ್ಲಾದಲ್ಲಿ ನಡೆದ ಒಂದು ಪ್ರಕರಣವಷ್ಟೇ ಅಲ್ಲ. ಈ ಹಿಂದೆಯೂ ರಾಮು ಮತ್ತು ನಾಸಿರ್ ನಗರ್ ಎಂಬಲ್ಲೆಲ್ಲಾ ಕೋಮು ಹಿಂಸಾಚಾರ ನಡೆಸುವ ಮೂಲಕ ದೇಶದಲ್ಲಿ ಅಸ್ಥಿರತೆ ಸೃಷ್ಟಿಸುವ ಪ್ರಯತ್ನಗಳು ನಡೆದಿದ್ದವು' ಎಂದು ನೆನಪಿಸಿದರು.
ಇನ್ನು ಶನಿವಾರ ರಾತ್ರಿ ಯಾವುದೇ ಘಟನೆಗಳು ನಡೆದಿಲ್ಲ. ನಮ್ಮ ಭದ್ರತಾ ಸಿಬ್ಬಂದಿ ತಾಳ್ಮೆಯಿಂದ ಗುಪ್ತಚರ ಮಾಹಿತಿ ಆಧರಿಸಿ ಕೆಲಸ ಮಾಡುತ್ತಿದ್ದಾರೆ. ಕೋಮು ಸೌಹಾರ್ದತೆಯನ್ನು ಹಾಳು ಮಾಡುವವ ಉದ್ದೇಶ ಈಡೇರದು ಎಂದು ಎಚ್ಚರಿಸಿದರು.
ದುರ್ಗಾಪೂಜಾ ಸಂದರ್ಭದಲ್ಲಿ ಮುಸ್ಲಿಮರ ಧಾರ್ಮಿಕ ಗ್ರಂಥ ಕುರಾನ್‌ಗೆ ಅವಮಾನ ಮಾಡಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಚೋದನೆಗೊಂಡ ದುಷ್ಕರ್ಮಿಗಳು ಚಂದಾಪುರ್, ಚಿತ್ತಗಾಂಗ್, ಗಾಜಿಪುರ್, ಬಂದರ್ಬನ್ ಹಾಗು ಮೌಲ್ವಿಬಜಾರ್ ಸೇರಿದಂತೆ ನಾನಾ ಕಡೆಗಳಲ್ಲಿ ಭಾರೀ ಹಿಂಸಾಚಾರ ನಡೆಸಿದ್ದರು. ಈ ಘಟನೆಗಳಲ್ಲಿ ಹಲವು ಅಮಾಯಕರು ಪ್ರಾಣ ಕಳೆದುಕೊಂಡಿದ್ದರು, ಸಾಕಷ್ಟು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.
ಕಳೆದ ಶುಕ್ರವಾರ ನೌಕಾಲಿ ಜಿಲ್ಲೆಯ ಬೇಗುಂಗಂಜ್ ಎಂಬಲ್ಲಿ ಜತನ್ ಕುಮಾರ್ ಸಾಹಾ ಅವರನ್ನು ದುಷ್ಕರ್ಮಿಗಳು ಕೊಂದು ಹಾಕಿದರೆ, ಇದೇ ವೇಳೆ 17 ಹೆಚ್ಚು ಜನರಿಗೆ ಗಾಯವಾಗಿತ್ತು. ಜನರು ವಿಜಯದಶಮಿಯ ದಿನ ದುರ್ಗಾಪೂಜೆಯಲ್ಲಿ ಭಾಗಿಯಾಗಿದ್ದಾಗ ನಡೆದಿದೆ ಎಂದು ಢಾಕಾ ಟ್ರಿಬ್ಯೂನ್ ವರದಿ ಮಾಡಿದೆ.
ಇದನ್ನೂ ಓದಿ: ಅಪಾರ ಆಸ್ತಿ ಸಂಗ್ರಹ: ಮಾಜಿ ಸಚಿವ ಸಿ. ವಿಜಯಭಾಸ್ಕರ್ ಮನೆ ಮೇಲೆ ACD ದಾಳಿ