ಮೆಲ್ಬೋರ್ನ್: ಭಾರತದಲ್ಲಿ ಕೊರೊನಾ ಎರಡನೇ ಅಲೆ ತೀವ್ರಗೊಳ್ಳುತ್ತಿರುವ ಕಾರಣ ಭಾರತದಿಂದ ಆಸ್ಟ್ರೇಲಿಯಾಗೆ ಹಾರಾಟ ನಡೆಸಲಿರುವ ಎಲ್ಲಾ ಪ್ರಯಾಣಿಕ ವಿಮಾನಗಳನ್ನು ಸ್ಥಗಿತಗೊಳಿಸಲಾಗಿದೆ.
ಮೇ 15ರ ವರೆಗೆ ತಾತ್ಕಾಲಿಕವಾಗಿ ಭಾರತದ ವಿಮಾನಗಳಿಗೆ ನಿಷೇಧ ಹೇರಿ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಆದೇಶ ಹೊರಡಿಸಿದ್ದಾರೆ. ಆಸ್ಟ್ರೇಲಿಯಾದ ರಾಷ್ಟ್ರೀಯ ಭದ್ರತಾ ಸಮಿತಿಯ ಕ್ಯಾಬಿನೆಟ್ ಸಭೆ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಹೀಗಾಗಿ ಕ್ರಿಕೆಟರ್ಗಳೂ ಸೇರಿದಂತೆ ನೂರಾರು ಆಸ್ಟ್ರೇಲಿಯಾ ಪ್ರಜೆಗಳು ಭಾರತದಲ್ಲೇ ಸಿಲುಕುವಂತಾಗಿದೆ.
ಇದನ್ನೂ ಓದಿ: ಇಂಗ್ಲೆಂಡ್, ಯುಎಇ, ಕೆನಡಾ ಹಾದಿ ತುಳಿದ ಕುವೈತ್: ಭಾರತದ ವಿಮಾನಗಳಿಗೆ ನಿಷೇಧ!
ಭಾರತದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಹಿನ್ನೆಲೆಯಲ್ಲಿ ಭಾರತದಿಂದ ಬರುವ ವಿಮಾನಗಳನ್ನು ಸಂಪೂರ್ಣವಾಗಿ ನಿಷೇಧಿಸಿದರೆ ತವರಿಗೆ ಮರಳುವುದು ಕಷ್ಟಕರವಾಗುತ್ತದೆ ಎಂದು ಐಪಿಎಲ್ ಟೂರ್ನಿಯಲ್ಲಿ ಭಾಗಿಯಾಗಿರುವ ಡೇವಿಡ್ ವಾರ್ನರ್ ಮತ್ತು ಸ್ಟೀವ್ ಸ್ಮಿತ್ ಸೇರಿದಂತೆ ಆಸ್ಟ್ರೇಲಿಯಾದ ಅಗ್ರ ಕ್ರಿಕೆಟಿಗರು ತಮ್ಮ ದೇಶಕ್ಕೆ ಮರಳಲು ನಿರ್ಧರಿಸಿದ್ದರು ಎಂದು ಹೇಳಲಾಗಿದೆ.
ಕೊರೊನಾ ಪರಿಸ್ಥಿತಿಯಿಂದಾಗಿ ಈಗಾಗಲೇ ಇಂಗ್ಲೆಂಡ್, ಯುಎಇ, ಕೆನಡಾ ಹಾಗೂ ಕುವೈತ್ ರಾಷ್ಟ್ರಗಳು ಭಾರತದಿಂದ ವಿಮಾನ ಹಾರಾಟ ನಿಷೇಧಿಸಿದ್ದವು.