ನ್ಯೂಯಾರ್ಕ್: ಅಮೆರಿಕ ಅಥವಾ ಇತರ ದೇಶಗಳಿಗೆ ವೀಸಾ ಹೊಂದಿರುವ ಅಮೆರಿಕನ್ ಮತ್ತು ಆಫ್ಘನ್ ನಾಗರಿಕರು ಸೇರಿದಂತೆ ಸುಮಾರು 1000 ಜನರನ್ನು ಅಫ್ಘಾನಿಸ್ತಾನದಿಂದ ಹೊರಹೋಗುವುದನ್ನು ತಾಲಿಬಾನ್ ತಡೆಯುತ್ತಿದೆ ಎಂದು ಯುಎಸ್ ಮಾಧ್ಯಮ ವರದಿಗಳು ಭಾನುವಾರ ತಿಳಿಸಿವೆ.
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಳ್ವಿಕೆ ಬಂದಾಗಿನಿಂದ ಅಲ್ಲಿನ ಜನರ ಸ್ಥಿತಿ ಶೋಚನೀಯವಾಗಿದೆ. ಈ ಹಿನ್ನೆಲೆಯಲ್ಲಿ ವಲಸೆ ಹೋಗಲು ಇಚ್ಛಿಸುವ ಜನರನ್ನು ಅಮೆರಿಕ ಸೇರಿದಂತೆ ಅನೇಕ ರಾಷ್ಟ್ರಗಳು ಅಲ್ಲಿಂದ ಸ್ಥಳಾಂತರ ಮಾಡಿವೆ. ಆದರೆ, ಇದೀಗ ತಾಲಿಬಾನ್ಗಳು ಕಾರ್ಯಾಚರಣೆಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ಹೇಳಲಾಗಿದೆ.
ಇನ್ನು ಸ್ಥಳಾಂತರಿಸುವ ಕಾರ್ಯಾಚರಣೆಗಳಿಗೆ ಸಂಬಂಧಿಸಿದಂತೆ ಮಾತನಾಡಿದ ಪೆಂಟಗನ್ ಅಧಿಕಾರಿಯೊಬ್ಬರು, "ಜನರು ಅಫ್ಘಾನಿಸ್ತಾನವನ್ನು ತೊರೆವುದನ್ನು ತಡೆಯಲು ತಾಲಿಬಾನ್ಗಳು ಬಯಸುತ್ತಿದ್ದಾರೆ. ಜನರನ್ನು ಅವಕಾಶದಂತೆ ಅವರು ಬಳಸಿಕೊಂಡರೆ ಆ ನಡೆ ಸ್ವೀಕಾರಾರ್ಹವಲ್ಲ" ಎಂದು ಹೇಳಿದ್ದಾರೆ.
ಮಜರ್-ಇ-ಷರೀಫ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕನ್ನರು ದೇಶದಿಂದ ಹೊರಹೋಗದಂತೆ ತಾಲಿಬಾನ್ ನಿರ್ಬಂಧಿಸಿದೆ ಎಂದು ಯುಎಸ್ ಹೌಸ್ ಫಾರಿನ್ ಅಫೇರ್ಸ್ ಕಮಿಟಿಯ ಹಿರಿಯ ರಿಪಬ್ಲಿಕನ್ ಮೈಕೆಲ್ ಮೆಕ್‌ವಾಲ್ ಹೇಳಿದ್ದಾರೆ.
ಕಳೆದ ಶುಕ್ರವಾರದಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕನ್, ಅಫ್ಘಾನಿಸ್ತಾನದಲ್ಲಿ ಉಳಿದಿರುವ ಅಮೆರಿಕನ್ನರೊಂದಿಗೆ ಯುನೈಟೆಡ್ ಸ್ಟೇಟ್ಸ್ ನಿರಂತರ ಸಂಪರ್ಕದಲ್ಲಿದೆ ಎಂದು ಹೇಳಿದ್ದರು.