ಕಠ್ಮಂಡು(ನೇಪಾಳ): ಭಾರತ - ನೇಪಾಳ ನಡುವಿನ ಗಡಿರೇಖೆ ವಿವಾದ ಹಿನ್ನೆಲೆಯಲ್ಲಿ, ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧಗಳನ್ನು ಮರುಹೊಂದಿಸುವ ಸಲುವಾಗಿ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನರವಾಣೆ ನೇಪಾಳಕ್ಕೆ ಮೂರು ದಿನಗಳ ನಿರ್ಣಾಯಕ ಭೇಟಿ ನೀಡಿದ್ದಾರೆ
ನೇಪಾಳದ ಸೇನಾ ಮುಖ್ಯಸ್ಥ ಜನರಲ್ ಪೂರ್ಣ ಚಂದ್ರ ಥಾಪಾ ಅವರ ಅಧಿಕೃತ ಆಹ್ವಾನದ ಮೇರೆಗೆ ಜನರಲ್ ನರವಣೆ ಭೇಟಿ ನೀಡಿದ್ದಾರೆ. ಅವರೊಂದಿಗೆ ಭಾರತೀಯ ಸೇನೆಯ ಸೇನಾ ಪತ್ನಿಯರ ಕಲ್ಯಾಣ ಸಂಘದ (ಎಡಬ್ಲ್ಯೂಡಬ್ಲ್ಯೂಎ) ಅಧ್ಯಕ್ಷರಾಗಿರುವ ಅವರ ಪತ್ನಿ ವೀಣಾ ನರವಾಣೆ ಸಹಾ ತೆರಳಿದ್ದಾರೆ.
ಇಂದು ಮಧ್ಯಾಹ್ನ ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ನರವಾಣೆ ದಂಪತಿಗಳನ್ನು ಜನರಲ್ ಆಫ್ ಜನರಲ್ ಸ್ಟಾಫ್ ಲೆಫ್ಟಿನೆಂಟ್ ಜೆನ್ ಪ್ರಭು ರಾಮ್ ಸ್ವಾಗತಿಸಿದ್ದಾರೆ.
ಇಂತಹ ಉನ್ನತ ಮಟ್ಟದ ಭೇಟಿಗಳ ವಿನಿಮಯ ಮತ್ತು ಈ ರೀತಿಯ ಸಂಪ್ರದಾಯದ ಮುಂದುವರಿಕೆ ಎರಡು ಸೈನ್ಯಗಳ ನಡುವಿನ ಸಂಬಂಧವನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಅಲ್ಲದೇ ಉಭಯ ದೇಶಗಳ ನಡುವಿನ ಸಂಬಂಧವನ್ನು ಹೆಚ್ಚಿಸಲು ಸಹಕಾರಿಯಾಗಿದೆ ಎಂದು ನೇಪಾಳಿ ಸೈನ್ಯವು ನಂಬಿದೆ, ಎಂದು ಅಲ್ಲಿನ ಸೇನಾ ವಕ್ತಾರರು ತಿಳಿಸಿದ್ದಾರೆ.
ಈ ಭೇಟಿಗಾಗಿ ಕುತೂಹಲದಿಂದ ಎದುರು ನೋಡುತ್ತಿದ್ದೆ, ಎರಡೂ ದೇಶಗಳ ಸೈನ್ಯಗಳ ನಡುವಿನ "ಸ್ನೇಹ ಸಂಬಂಧಗಳನ್ನು" ಬಲಪಡಿಸುವಲ್ಲಿ ಇದು ಬಹಳ ದೂರ ಸಾಗಲಿದೆ ಎಂಬ ವಿಶ್ವಾಸವನ್ನು ಹೊಂದಿದ್ದೇನೆ ಎಂದು ಜನರಲ್ ನರವಾಣೆ ಹೇಳಿದರು.
ಅವರು ನೇಪಾಳ ಸೇನೆಯ ಪ್ರಧಾನ ಕಚೇರಿಯಲ್ಲಿ ನಾಳೆ ಔಪಚಾರಿಕ ಮಾತುಕತೆ ನಡೆಸಲಿದ್ದಾರೆ.