ಕಾಬೂಲ್ (ಅಫ್ಘಾನಿಸ್ತಾನ): ಕಾಬೂಲ್ನಲ್ಲಿ ಯುಎಸ್ ನಿರ್ವಹಣೆಯಡಿಯಿರುವ ವಿಮಾನ ನಿಲ್ದಾಣವನ್ನು ತಲುಪಲು ಯತ್ನಿಸುತ್ತಿದ್ದ ಅಮೆರಿಕ ಪ್ರಜೆಗಳನ್ನು ತಾಲಿಬಾನ್ ಉಗ್ರರು ಥಳಿಸಿದ್ದಾರೆ ಎಂದು ಪೆಂಟಗಾನ್ ಪತ್ರಿಕಾ ಕಾರ್ಯದರ್ಶಿ ಜಾನ್ ಕಿರ್ಬಿ ಹೇಳಿದ್ದಾರೆ.
ಅಫ್ಘನ್ನಲ್ಲಿರುವ ತನ್ನ ಪ್ರಜೆಗಳಿಗೆ ಭದ್ರತಾ ಸಲಹೆ ಬಿಡುಗಡೆ ಮಾಡುವಂತೆ ಅಮೆರಿಕಕ್ಕೆ ಐಸಿಸ್ (ISIS) ಉಗ್ರರು ಬೆದರಿಕೆ ಹಾಕಿದ್ದ ಬೆನ್ನಲ್ಲೇ ನಿನ್ನೆ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಬೇಡಿ ಎಂದು ತನ್ನ ನಾಗರಿಕರಿಗೆ ಯುಎಸ್ ತಿಳಿಸಿತ್ತು. ಇದರ ಬೆನ್ನಲ್ಲೇ ಇಂದು ಈ ಘಟನೆ ನಡೆದಿದೆ. ಸೂಕ್ತ ದಾಖಲೆಗಳನ್ನು ತೋರಿಸಿದವರಿಗೆ ಮಾತ್ರ ತಾಲಿಬಾನ್ ಚೆಕ್‌ಪೋಸ್ಟ್‌ಗಳ ಮೂಲಕ ಹೋಗಲು ಬಿಡಲಾಗುತ್ತಿದೆ.
ಇದನ್ನೂ ಓದಿ: ಅಮೆರಿಕನ್ನರು ಕಾಬೂಲ್ ಏರ್ಪೋರ್ಟ್ಗೆ ಪ್ರಯಾಣಿಸುವುದನ್ನ ನಿಯಂತ್ರಿಸಿ: ISIS ಬೆದರಿಕೆ
ಯುಎಸ್ ರಕ್ಷಣಾ ಸಚಿವಾಲಯ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಾನ್ ಕಿರ್ಬಿ, ಅಲ್ಲಿ ಕಿರುಕುಳಗಳು ನಡೆಯುತ್ತಿವೆ. ಕಳೆದ ವಾರದಲ್ಲಿ ಕೆಲವು ದೈಹಿಕ ಹಿಂಸಾಚಾರಗಳು ನಡೆದಿವೆ. ನಮ್ಮ ಪ್ರಜೆಗಳನ್ನು ರಕ್ಷಿಸುವ ಪ್ರಯತ್ನಗಳು ಮುಂದುವರೆದಿದೆ ಎಂದು ಹೇಳಿದರು.
ಕಳೆದೊಂದು ವಾರದಲ್ಲಿ ಒಟ್ಟು 17,000 ಜನರನ್ನು ಅಫ್ಘಾನಿಸ್ತಾನದಿಂದ ನೆಲದಿಂದ ಸ್ಥಳಾಂತರಿಸಲಾಗಿದ್ದು, ಇದರಲ್ಲಿ 2,500 ಮಂದಿ ಅಮೆರಿಕನ್ನರು ಎಂದು ಯುಎಸ್ ಸೇನೆಯ ಮೇಜರ್ ಜನರಲ್ ಹ್ಯಾಂಕ್ ಟೇಲರ್ ಅಂಕಿ ಅಂಶಗಳನ್ನು ನೀಡಿದ್ದಾರೆ.