ಬೀಜಿಂಗ್: ಸ್ಪರ್ಧಾತ್ಮಕ ವಿರೋಧಿ ತಂತ್ರ ಆರೋಪದಡಿ ವಿಶ್ವದ ಅತಿದೊಡ್ಡ ಇ-ಕಾಮರ್ಸ್ ಕಂಪನಿಯಾದ ಅಲಿಬಾಬಾ ಗ್ರೂಪ್‌ಗೆ ಚೀನಾ 2.8 ಬಿಲಿಯನ್ ಡಾಲರ್ ದಂಡ ವಿಧಿಸಿದೆ.
ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷವು ವೇಗವಾಗಿ ಬೆಳೆಯುತ್ತಿರುವ ಐಟಿ ಕಂಪನಿಗಳ ಮೇಲೆ ಹಿಡಿತ ಸಾಧಿಸುತ್ತಿದ್ದು, ಇದರ ಪರಿಣಾಮವನ್ನು ಮತ್ತೆ ಮತ್ತೆ ಅಲಿಬಾಬಾ ಕಂಪನಿ ಎದುರಿಸುತ್ತಿದೆ.
ಕೆಲ ದಿನಗಳ ಹಿಂದೆ ಕೂಡ ಮಾಧ್ಯಮ ಕಂಪನಿಗಳಲ್ಲಿನ ಷೇರುಗಳನ್ನು ಹಿಂಪಡೆಯುವಂತೆ ಅಲಿಬಾಬಾ ಮತ್ತು ಆಂಟ್ ಗ್ರೂಪ್ ಸ್ಥಾಪಕ ಜಾಕ್ ಮಾಗೆ ಚೀನಾ ಆದೇಶ ನೀಡಿತ್ತು. ಜಾಕ್ ಅವರು ಮಾಧ್ಯಮ ಕಂಪನಿಗಳಲ್ಲಿ ಸಾಕಷ್ಟು ಪಾಲು ಹೊಂದಿದ್ದು, ಸಾರ್ವಜನಿಕ ಅಭಿಪ್ರಾಯದ ಮೇಲೆ ಪ್ರಭಾವ ಬೀರುತ್ತಿದ್ದಾರೆ ಎಂದು ಚೀನಾ ಆರೋಪಿಸಿತ್ತು.
ಹೆಚ್ಚಿನ ಓದಿಗೆ: ಜಿನ್ಪಿಂಗ್ ಸರ್ಕಾರ ಕೆಣಕಿದ 'ಜಾಕ್ ಮಾ'ಗೆ ಮತ್ತೊಂದು ಸಂಕಷ್ಟ!
ಕೊರೊನಾದಿಂದ ಚೇತರಿಸಿಕೊಂಡು ಮತ್ತೆ ಆರ್ಥಿಕ, ಆರೋಗ್ಯ ಕ್ಷೇತ್ರಗಳಲ್ಲಿ ಸುಧಾರಿಸುತ್ತಿರುವ ವೇಳೆ ಮಾಹಿತಿ ತಂತ್ರಜ್ಞಾನ ಕಂಪನಿಗಳು ಸ್ಪರ್ಧಾತ್ಮಕ ವಿರೋಧಿ ತಂತ್ರ ಬಳಸುತ್ತಿದೆ. ಅಲಿಬಾಬಾ ಕಂಪನಿಯು ತನ್ನ ಪ್ಲ್ಯಾಟ್‌ಫಾರ್ಮ್‌ಗಳನ್ನು ಚಿಲ್ಲರೆ ವ್ಯಾಪಾರಿಗಳಿಗೆ ಸೀಮಿತಗೊಳಿಸಿ, ಸ್ಪರ್ಧೆಯನ್ನು ಮಿತಿಗೊಳಿಸಲು ಹಾಗೂ ಸರಕುಗಳ ಮುಕ್ತ ವ್ಯಾಪಾರಕ್ಕೆ ಅಡ್ಡಿಯುಂಟುಮಾಡಲು ತನ್ನ ಪ್ರಬಲ ಸ್ಥಾನ ದುರುಪಯೋಗಪಡಿಸಿಕೊಂಡಿದ್ದಕ್ಕಾಗಿ ದಂಡ ವಿಧಿಸಲಾಗಿದೆ ಎಂದು ಚೀನಾದ ಮಾರುಕಟ್ಟೆ ನಿಯಂತ್ರಣಾ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.