ಇಸ್ಲಾಮಾಬಾದ್: ಪಾಕ್ ಪ್ರಧಾನಿ ಇಮ್ರಾನ್ ಖಾನ್‌ಗೆ ಅಧಿಕಾರ ಕಳೆದು ಕೊಳ್ಳುವ ಭೀತಿ ಶುರುವಾಗಿದೆ. ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಅಧ್ಯಕ್ಷ ಬಿಲಾವಲ್ ಭುಟ್ಟೋ-ಜರ್ದಾರಿ ಅವರು ಪ್ರಧಾನಿ ಇಮ್ರಾನ್ ಖಾನ್ ರಾಜೀನಾಮೆಗೆ ಒತ್ತಾಯಿಸಿದ್ದು, ಲೋಕಸಭೆ ವಿಸರ್ಜಿಸಲು 24 ಗಂಟೆಗಳ ಗಡುವು ನೀಡಿದ್ದಾರೆ. ಇದರ ಜೊತೆಗೆ ಅವಿಶ್ವಾಸ ನಿರ್ಣಯದ ಮೂಲಕ ಪದಚ್ಯುತಗೊಳಿಸಲು ಸಿದ್ಧರಾಗಿ ಎಂಬ ಸೂಚನೆ ನೀಡಿದ್ದಾರೆಂದು ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಲಾಲಮುಸಾದಲ್ಲಿ ಅವಾಮಿ ಮಾರ್ಚ್‌ನಲ್ಲಿ ಭಾಗವಹಿಸಿದವರನ್ನು ಉದ್ದೇಶಿಸಿ ಮಾತನಾಡಿರುವ ಪಿಪಿಪಿ ನಾಯಕ ಜರ್ದಾರಿ, ಪಾಕಿಸ್ತಾನ್ ತೆಹ್ರೀಕ್ - ಇ - ಇನ್ಸಾಫ್ (ಪಿಟಿಐ) ಸರ್ಕಾರದೊಂದಿಗೆ ಇಮ್ರಾನ್ ಖಾನ್ ಅವರನ್ನು ಎಲ್ಲ ಪ್ರಜಾಸತ್ತಾತ್ಮಕ ವಿಧಾನಗಳಿಂದ ಕೆಳಗಿಳಿಸಿ ಗುಂಟು ಮೂಟೆ ಕಟ್ಟಿಸಿ ಮನೆಗೆ ಕಳುಹಿಸುವುದಾಗಿ ಹೇಳಿದ್ದಾರೆಂದು ದಿ ನ್ಯೂಸ್ ಇಂಟರ್‌ನ್ಯಾಷನಲ್ ವರದಿ ಮಾಡಿದೆ.
ಇಮ್ರಾನ್ ಖಾನ್ ಸರ್ಕಾರ ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ನಡುವಿನ ಸಂಬಂಧವನ್ನು ಉಲ್ಲೇಖಿಸಿರುವ ಪಿಪಿಪಿ ಅಧ್ಯಕ್ಷ ಜರ್ದಾರಿ, ದೇಶವು ಸರ್ಕಾರದ ಆರ್ಥಿಕ ನೀತಿಗಳನ್ನು ತಿರಸ್ಕರಿಸಿ 'ಪಿಟಿಐಎಂಎಫ್' (ಪಿಟಿಐ + ಐಎಂಎಫ್) ವಿರುದ್ಧ ಪ್ರತಿಭಟಿಸುತ್ತಿದೆ ಎಂದು ಹೇಳಿದರು.
ದೇಶದ ಆರ್ಥಿಕ ಬಿಕ್ಕಟ್ಟಿಗೆ 'ಕೈಗೊಂಬೆ' ಪ್ರಧಾನಿಯೇ ಕಾರಣ. ಸಾಮಾನ್ಯ ಜನರು ಹಣದುಬ್ಬರದ ಸುನಾಮಿಯಲ್ಲಿ ಮುಳುಗುತ್ತಿದ್ದಾರೆ. ಇಮ್ರಾನ್ ಖಾನ್ ಸರ್ಕಾರವು ಸಾಲಕ್ಕಾಗಿ ಬೇಡಿಕೊಳ್ಳುತ್ತಿದೆ. ಇದು ಹಿಂದೆ ಪಡೆದಿದ್ದಕ್ಕಿಂತ ಮೂರು ಪಟ್ಟು ಹೆಚ್ಚಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಯುದ್ಧಪೀಡಿತ ಉಕ್ರೇನ್ಗೆ ₹1,768 ಕೋಟಿ ನೆರವು ಘೋಷಿಸಿದ ಬ್ರಿಟನ್