ಕಾಬೂಲ್ (ಅಫ್ಘಾನಿಸ್ತಾನ) : ನಗರದಲ್ಲಿ ತಾಲಿಬಾನ್ ಪಡೆ ಗಸ್ತು ತಿರುಗುತ್ತಿರುವುದು ದಿನೇದಿನೆ ಹೆಚ್ಚಾಗುತ್ತಿದೆ. ಸಾವಿರಾರು ಜನರು ಹೆದರಿ ದೇಶ ತೊರೆಯುತ್ತಿದ್ದು, ಕಾಬೂಲ್ ಏರ್ಪೋರ್ಟ್ ಬಳಿ ಜಮಾಯಿಸಿದ್ದಾರೆ. ಏರ್ಪೋರ್ಟ್ನಲ್ಲಿ ಬ್ರಿಟಿಷ್ ವಿಮಾನ ನಿಂತಿದ್ದು, ವಿಮಾನ ನಿಲ್ದಾಣದ ಒಳಪ್ರವೇಶಿಸದಂತೆ ಗೇಟ್ಗಳನ್ನು ಅಳವಡಿಸಲಾಗಿದೆ. ದಾಖಲೆ ಇದ್ದವರನ್ನು ಮಾತ್ರ ತಾಲಿಬಾನಿಗಳು ಏರ್ಪೋರ್ಟ್ ಒಳಗೆ ಬಿಡುತ್ತಿದ್ದಾರೆ.
ಅನೇಕ ಜನರು ಪಾಸ್ಪೋರ್ಟ್ ಸೇರಿ ಯಾವುದೇ ದಾಖಲಾತಿಗಳನ್ನು ಹೊಂದಿಲ್ಲ. ಈ ಹಿನ್ನೆಲೆ ತಾಲಿಬಾನ್ ಪಡೆ, ದಾಖಲಾತಿ ಹೊಂದಿರದ ಜನರನ್ನು ಏರ್ಪೋರ್ಟ್ ಒಳಗೆ ಬಿಡುತ್ತಿಲ್ಲ. ಪ್ರತಿ ಬಾರಿ ವಿಮಾನ ನಿಲ್ದಾಣ ಪ್ರವೇಶಿಸುವ ಗೇಟ್ಗಳನ್ನು ತೆರೆದಾಗ ನೂರಾರು ಜನರು ಒಳಹೋಗಲು ಪ್ರಯತ್ನಿಸಿ, ನೂಕುನುಗ್ಗಲು ಉಂಟಾಯಿತು. ಜನಸಂದಣಿ ನಿಯಂತ್ರಿಸುವ ನಿಟ್ಟಿನಲ್ಲಿ ತಾಲಿಬಾನ್ ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿತು.
ಯಾವುದೇ ದಾಖಲೆಯಿಲ್ಲದ ಓರ್ವ ಮಹಿಳೆ ಇಂಗ್ಲೆಂಡ್ಗೆ ಪ್ರಯಾಣ ಬೆಳೆಸಲು ಸೈನಿಕರೊಬ್ಬರು ಅನುಕೂಲ ಮಾಡಿಕೊಟ್ಟಿದ್ದಾರೆ. ಈ ಕುರಿತು ವಿಮಾನ ನಿಲ್ದಾಣದ ಹೊರಗೆ ಮಾತನಾಡಿದ ಫಾತಿಮಾ, ನನ್ನ ಪತಿ ತಾಲಿಬಾನ್ ಜತೆ ಸೇರಿದ್ದು, ನನಗೆ ಚಿತ್ರಹಿಂಸೆ ನೀಡುತ್ತಿದ್ದಾನೆ. ನಾನು ದೇಶಬಿಟ್ಟು ಇತರ ದೇಶಕ್ಕೆ ಹೋಗಲು ಯಾವುದೇ ದಾಖಲಾತಿಗಳಿಲ್ಲ. ನನ್ನ ಬಳಿಯಿರುವ ಏಕೈಕ ದಾಖಲೆಯೆಂದರೆ ವಿಶ್ವಸಂಸ್ಥೆ ನನ್ನನ್ನು ಸಂತ್ರಸ್ತೆ ಎಂದು ಗುರುತಿಸುವ ಒಂದು ಪತ್ರವಷ್ಟೇ ಎಂದರು.
ದಾಖಲೆಗಳಿಲ್ಲದೆ ಅನೇಕ ಜನರು, ದಿಕ್ಕು ತೋಚದೇ ಹಿಂದಿರುಗಿದರು. ಆದರೆ, ಬ್ರಿಟಿಷ್ ಸೈನಿಕನ ಸಹಾಯದಿಂದ ಈ ಮಹಿಳೆ ಹಾಗೂ ಮಕ್ಕಳು ಇಂಗ್ಲೆಂಡ್ಗೆ ಪ್ರಯಾಣ ಬೆಳೆಸಲಿದ್ದಾರೆ.
ಇದನ್ನೂ ಓದಿ: ತಾಲಿಬಾನ್ ರಣಕೇಕೆಗೆ ನಲುಗಿದ ಆಫ್ಘನ್... ಅಲ್ಲಿನ ಒಟ್ಟಾರೆ ಪರಿಸ್ಥಿತಿ ಚಿತ್ರಣ ಹೀಗಿದೆ!
ಸದ್ಯ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ 1990 ರ ದಶಕದ ಘಟನೆಗಳು ಮರುಕಳಿಸುವ ಸಾಧ್ಯತೆಯಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.