ಕಾಬೂಲ್ (ಅಫ್ಘಾನಿಸ್ತಾನ): ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ, ಶನಿವಾರ ದಾಖಲಿಸಿದ ಸಂದೇಶದಲ್ಲಿ, ತಾಲಿಬಾನ್ ಸ್ವಾಧೀನದಿಂದಾಗಿ ದೇಶವು ದೊಡ್ಡ ಬೆದರಿಕೆಗೆ ಸಿಲುಕಿದೆ. ಆದರೆ, "ಪರಿಸ್ಥಿತಿ ನಿಯಂತ್ರಣದಲ್ಲಿದೆ" ಎಂದು ಹೇಳಿದ್ದಾರೆ. ಈ ಬೆನ್ನಲ್ಲೇ ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಯಿದೆ ಎಂಬ ವರದಿಗಳು ಸಹ ಪ್ರಸಾರವಾಗುತ್ತಿವೆ.
ವರದಿಗಳ ಪ್ರಕಾರ, ಅಫ್ಘಾನಿಸ್ತಾನದ ಬಹುಭಾಗವನ್ನು ತಾಲಿಬಾನ್ ವಶಕ್ಕೆ ಪಡೆದ ಹಿನ್ನೆಲೆ ಘನಿ ಇಂತಹದೊಂದು ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ಈಗಾಗಲೇ ತಮ್ಮ ರಾಜೀನಾಮೆ ಹೇಳಿಕೆ ದಾಖಲಿಸಿರುವ ಘನಿ ಅವರು ರಾಷ್ಟ್ರ ಉದ್ದೇಶಿಸಿ ಮಾತನಾಡಲಿದ್ದಾರೆ ಎನ್ನಲಾಗಿದೆ.
ಇತ್ತೀಚಿನ ದಾಳಿಯಲ್ಲಿ, ಲೋಗರ್ ಪ್ರಾಂತ್ಯ ಸ್ವಾಧೀನಪಡಿಸಿಕೊಂಡ ನಂತರ ಭಯೋತ್ಪಾದಕ ಗುಂಪು ಉತ್ತರ ಅಫ್ಘಾನಿಸ್ತಾನದ ಪ್ರಮುಖ ನಗರವಾದ ಮಜರ್ - ಇ - ಶರೀಫ್ ಮೇಲೆ ದಾಳಿ ಆರಂಭಿಸಿತು. ಆದರೆ, ಸಾವು - ನೋವುಗಳ ಬಗ್ಗೆ ತಕ್ಷಣಕ್ಕೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಅಮೆರಿಕ ಅಧಿಕಾರಿಗಳು ರಾಯಭಾರ ಕಚೇರಿಯಿಂದ ಹೊರಡಲು ಅಣಿ
ಅಮೆರಿಕ ಅಧಿಕಾರಿಗಳು ಮತ್ತು ಸಿಬ್ಬಂದಿ ಅಫ್ಘಾನಿಸ್ತಾನದ ರಾಯಭಾರ ಕಚೇರಿಯಿಂದ ಹೊರಡಲು ಸಜ್ಜಾಗಿದ್ದು, ತಾಲಿಬಾನಿಗಳು ಅಕ್ಷರಶಃ ಕಾಬೂಲ್‌ನ ಬಾಗಿಲಲ್ಲಿದ್ದಾರೆ. ಘನಿ ಬುಧವಾರ ನಗರದ ರಕ್ಷಣೆಯನ್ನು ಒಟ್ಟುಗೂಡಿಸಲು ಮಜರ್ - ಇ - ಶರೀಫ್‌ಗೆ ತೆರಳಿದ್ದರು. ಸರ್ಕಾರದೊಂದಿಗೆ ಮಿತ್ರರಾಗಿರುವ ಹಲವಾರು ಮಿಲಿಟರಿ ಕಮಾಂಡರ್‌ಗಳನ್ನು ಭೇಟಿಯಾದರು. ಕಂದಹಾರ್ ನಂತರ, ತಾಲಿಬಾನಿಗಳು ನಗರದ ಪ್ರಮುಖ ರೇಡಿಯೋ ಕೇಂದ್ರವನ್ನು ಸ್ವಾಧೀನಪಡಿಸಿಕೊಂಡರು.
ಈ ಆಕಾಶವಾಣಿ ಕೇಂದ್ರಕ್ಕೆ ‘ವಾಯ್ಸ್ ಆಫ್ ಷರಿಯಾ’ ಎಂದು ಮರು ನಾಮಕರಣ ಮಾಡಲಾಗಿದೆ. ಸಂಸ್ಥೆಯ ಎಲ್ಲ ಸಿಬ್ಬಂದಿ ಆಕಾಶವಾಣಿ ಕೇಂದ್ರದಲ್ಲಿಯೇ ಇದ್ದಾರೆ. ಇಲ್ಲಿ ಸುದ್ದಿ, ರಾಜಕೀಯ ವಿಶ್ಲೇಷಣೆ ಮತ್ತು ಕುರಾನ್ ಪಠಣ ಪ್ರಸಾರ ಮಾಡಲಾಗುವುದು ಎಂದು ತಾಲಿಬಾನ್ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ತಿಳಿಸಲಾಗಿದೆ.
ಅಫ್ಘಾನ್ನಲ್ಲಿ ತಾಲಿಬಾನ್ ಪಾರಮ್ಯ
ತಾಲಿಬಾನ್ ಇತ್ತೀಚಿನ ವಾರಗಳಲ್ಲಿ ಉತ್ತರ, ಪಶ್ಚಿಮ ಮತ್ತು ದಕ್ಷಿಣ ಅಫ್ಘಾನಿಸ್ತಾನದ ಬಹುಭಾಗ ವಶಪಡಿಸಿಕೊಂಡಿದೆ. ಪಾಶ್ಚಿಮಾತ್ಯ ಬೆಂಬಲಿತ ಸರ್ಕಾರವು ಮಧ್ಯ ಮತ್ತು ಪೂರ್ವ ಹಾಗೂ ಕಾಬೂಲ್‌ನ ಪ್ರಾಂತ್ಯಗಳ ಮೇಲೆ ನಿಯಂತ್ರಣ ಸಾಧಿಸಿತು.
ತಾಲಿಬಾನ್ ಕಂದಹಾರ್, ಹೆರಾತ್ ಮತ್ತು ಲಷ್ಕರ್ ಗಾಹ್ ನಂತಹ ನಗರಗಳನ್ನು ಆಕ್ರಮಿಸಿಕೊಂಡಿತು, ಕ್ರಮೇಣವಾಗಿ ರಾಜಧಾನಿ ಕಾಬೂಲ್ನಲ್ಲಿ ಸರ್ಕಾರವನ್ನು ಸುತ್ತುವರಿಯಿತು. ಕೆಲವು ತಿಂಗಳುಗಳಲ್ಲಿ ತಾಲಿಬಾನ್ ದೇಶದ ಸಂಪೂರ್ಣ ನಿಯಂತ್ರಣವನ್ನು ಪಡೆಯಬಹುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ಓದಿ: ಆಫ್ಘನ್ ರಾಯಭಾರಿ ಕಚೇರಿ ತೊರೆಯಲು ಅಮೆರಿಕ ಸಜ್ಜು: ಕಾಬೂಲ್ ಹೊಸ್ತಿಲಲ್ಲಿ ತಾಲಿಬಾನ್!