ಕಾಬೂಲ್(ಅಫ್ಘಾನಿಸ್ತಾನ): ತಾಲಿಬಾನ್ ದಿನದಿಂದ ದಿನಕ್ಕೆ ಅಫ್ಘಾನಿಸ್ತಾನವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಹವಣಿಸುತ್ತಿದೆ. ಈ ಹಿನ್ನೆಲೆಯಲ್ಲಿ ಅಫ್ಘನ್ನ ದಕ್ಷಿಣ ಪ್ರಾಂತ್ಯದ ಕಂದಹಾರ್ನಲ್ಲಿ ತಾಲಿಬಾನ್ ಪಡೆಗಳೊಂದಿಗೆ ಪೊಲೀಸ್ ಅಧಿಕಾರಿಯೊಬ್ಬ 18 ಗಂಟೆಗಳ ಕಾಲ ಹೋರಾಡಿರುವ ಘಟನೆ ನಡೆದಿದೆ.
ಕಂದಾಹಾರ್ ಉಪನಗರದ ಹೊರನಗರದ ಚೆಕ್ ಪೋಸ್ಟ್ನಲ್ಲಿ ಅಹ್ಮದ್ ಶಾ ಎಂಬ ಪೊಲೀಸ್ ಅಧಿಕಾರಿಯನ್ನು ನೇಮಿಸಲಾಗಿತ್ತು. ಈ ವೇಳೆ ತಾಲಿಬಾನ್ ಸೈನಿಕರು ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಅಹ್ಮದ್ ಶಾ ಗಾಯಗೊಂಡಿದ್ದರೂ, ತಾಲಿಬಾನಿಗಳಿಗೆ ಶರಣಾಗದೇ ಸುಮಾರು 18 ಗಂಟೆಗಳ ಕಾಲ ಏಕಾಂಗಿ ಹೋರಾಟ ನಡೆಸಿದ್ದಾರೆ ಎಂದು ಟೋಲೋ ನ್ಯೂಸ್ ವರದಿ ಮಾಡಿದೆ.
18 ಗಂಟೆಗಳ ನಿರಂತರ ಹೋರಾಟದ ನಂತರ ಸ್ಥಳಕ್ಕೆ ಧಾವಿಸಿದ ಆಫ್ಘನ್ ಸೇನೆ ಅಹ್ಮದ್ ಶಾ ಅವರನ್ನು ರಕ್ಷಿಸಿದೆ. ಅವರನ್ನು ತಕ್ಷಣ ಆಸ್ಪತ್ರೆಗೆ ಸೇರಿಸಲಾಯಿತು. ಅವರ ಆರೋಗ್ಯ ಸ್ಥಿರವಾಗಿದೆ ಎಂದು ಮೂಲಗಳು ತಿಳಿಸಿವೆ.
ನಾನು ಶರಣಾಗಲಿಲ್ಲ ಅವರ ವಿರುದ್ಧ ಗಾಯಗೊಂಡರೂ ಹೋರಾಡಿದೆ. ಶತ್ರುಗಳು ತುಂಬಾ ದುರ್ಬಲರಾಗಿದ್ದರು. ಅವರವರ ವಿಧಾನಗಳ ಮೂಲಕ ನಮ್ಮನ್ನು ಹೆದರಿಸಲು ಅವರು ಮುಂದಾಗುತ್ತಾರೆ. ಆದರೆ ಯಾರೂ ತಾಲಿಬಾನಿಗಳನ್ನು ನೋಡಿ ಭಯಪಡಬಾರದು ಎಂದಿದ್ದಾರೆ.
ಅಫ್ಘಾನಿಸ್ತಾನವು ಸಾರ್ವಭೌಮ ದೇಶ, ಅದು ಸ್ವತಂತ್ರ ಸೈನ್ಯ ಮತ್ತು ಸಾರ್ವಭೌಮ ವ್ಯವಸ್ಥೆಯನ್ನು ಹೊಂದಿದೆ, ಅದಕ್ಕೆ ಸಂವಿಧಾನವಿದೆ, ನಾವು ಇಸ್ಲಾಮಿಕ್ ರಿಪಬ್ಲಿಕ್ ಆಫ್ ಅಫ್ಘಾನಿಸ್ತಾನದ ರಕ್ಷಕರು ಎಂದು ಆಫ್ಘನ್ ವಿಶೇಷ ಪಡೆಗಳ ಸದಸ್ಯ ಫಜೆಲ್ ಮೊಹಮ್ಮದ್ ದೌಡ್ಜೈ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಗಡ್ಡ ತೆಗಿಯಂಗಿಲ್ಲ, ಒಂಟಿಯಾಗಿ ಮಹಿಳೆ ಓಡಾಡಂಗಿಲ್ಲ, ಭಯೋತ್ಪಾದಕರಿಗೂ ಧೂಮಪಾನ ವರ್ಜಿತ: ಇದು ತಾಲಿಬಾನ್ ಕಾನೂನು!