ವಾಷಿಂಗ್ಟನ್ ಡಿಸಿ(ಅಮೆರಿಕ): ಕಾಯಕವೇ ಕೈಲಾಸ ಅಂತಾರೆ. ಇಲ್ಲಿ ಯಾವುದೇ ಕೆಲಸ ಮೇಲೂ ಅಲ್ಲ, ಕೀಳೂ ಅಲ್ಲ. ಶ್ರದ್ಧೆ, ಪರಿಶ್ರಮ, ಪ್ರಾಮಾಣಿಕತೆಯಿಂದ ಮಾಡುವ ಕಾಯಕ ದೇವರ ಕೃಪೆಗೆ ಪಾತ್ರವಾಗುತ್ತದೆ. ಆದ್ರೆ ಇಲ್ಲೊಂದು ವಿಚಿತ್ರ ಸುದ್ದಿ ಇದೆ ಓದಿ.
ಅಫ್ಘಾನಿಸ್ತಾನ ಸಂಪೂರ್ಣವಾಗಿ ತಾಲಿಬಾನಿ ಉಗ್ರರ ಕೈ ಸೇರಿರುವುದು ನಿಮಗೆ ಗೊತ್ತೇ ಇದೆ. ಆದ್ರೆ ಈ ದೇಶದಲ್ಲಿ ನಾಗರಿಕ ಸರ್ಕಾರವಿದ್ದ ಸಂದರ್ಭದಲ್ಲಿ ಹಣಕಾಸು ಸಚಿವರಾಗಿ ಕಾರ್ಯನಿರ್ವಹಿಸಿದ್ದ ಖಾಲಿದ್ ಪಯೆಂಡಾ ಎಂಬವರ ಕಥೆ ನಿಜಕ್ಕೂ ಬೇಸರ ಹುಟ್ಟಿಸುವಂತಿದೆ. ಏಕೆಂದರೆ, ಈ ವ್ಯಕ್ತಿ ಸದ್ಯ ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿ ಉಬರ್ ಕ್ಯಾಬ್ ಡ್ರೈವರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಬಲವಂತವಾಗಿ ಅಧಿಕಾರಕ್ಕೇರುವ ಮುನ್ನ ಅಧ್ಯಕ್ಷ ಅಶ್ರಫ್ ಘನಿ ನೇತೃತ್ವದ ಸರ್ಕಾರವಿತ್ತು. ಆದರೆ, ತಾಲಿಬಾನಿಗಳು ದೇಶವನ್ನು ಸಂಪೂರ್ಣವಾಗಿ ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡ ನಂತರ ಬಹುತೇಕ ಎಲ್ಲ ಸಚಿವರು ದೇಶ ಬಿಟ್ಟು ಬೇರೆ ದೇಶಗಳಿಗೆ ಪಲಾಯನ ಮಾಡಬೇಕಾಯಿತು. ಅದೇ ರೀತಿ ಆ ಸಂದರ್ಭದಲ್ಲಿ ಹಣಕಾಸು ಸಚಿವರಾಗಿದ್ದ ಪಯೆಂಡಾ ಕೂಡ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಂಧನಕ್ಕೊಳಗಾಗುವ ಭಯದಿಂದ ಅಮೆರಿಕಕ್ಕೆ ತೆರಳಿ ಬದುಕು ಕಂಡುಕೊಂಡರು.
ಇದೀಗ ತಮ್ಮ ಕುಟುಂಬದ ಜವಾಬ್ದಾರಿ ಹೊತ್ತುಕೊಂಡಿರುವ ಅವರು, ಪ್ರತಿದಿನ ಉಬರ್ ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ದಿನವೊಂದಕ್ಕೆ 150 ಡಾಲರ್ ಸಂಪಾದನೆ ಮಾಡುತ್ತಿದ್ದಾರೆ. ಇದರ ಜೊತೆಗೆ, ಜಾರ್ಜ್ಟೌನ್ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿಯೂ ಕೆಲಸ ಮಾಡ್ತಿದ್ದಾರೆ.
'ನಾನು ಅಮೆರಿಕದವನಲ್ಲ. ಅಫ್ಘಾನಿಸ್ತಾನಕ್ಕೂ ಸೇರಿಲ್ಲ. ನನಗೆ ಸದ್ಯ ನನ್ನದೇ ಆದ ದೇಶವಿಲ್ಲ. ಹೀಗಾಗಿ ನನ್ನ ಮನಸ್ಸಿನಲ್ಲಿ ನಿರ್ವಾತ ಭಾವನೆ ಮೂಡುತ್ತಿದೆ. ಆದರೆ, ಜೀವನೋಪಾಯಕ್ಕಾಗಿ ಕೆಲಸ ಮಾಡಿ, ಕುಟುಂಬದ ಜವಾಬ್ದಾರಿ ಹೊತ್ತುಕೊಂಡಿದ್ದೇನೆ' ಎಂದು ಅವರು ಬೇಸರದಿಂದಲೇ ಹೇಳುತ್ತಾರೆ.