ಯಾಂಗೊನ್: ಭಾನುವಾರ ಮ್ಯಾನ್ಮಾರ್ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ, ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ (ಎನ್‌ಎಲ್‌ಡಿ) ಪಕ್ಷದ ಆಂಗ್ ಸಾನ್ ಸೂ ಕಿ ಅಧಿಕಾರದ ಚುಕ್ಕಾಣಿ ಹಿಡಿಯಲು ಸಜ್ಜಾಗಿದ್ದಾರೆ.
56 ಮಿಲಿಯನ್ ಜನಸಂಖ್ಯೆ ಹೊಂದಿರುವ ಮ್ಯಾನ್ಮಾರ್‌ನಲ್ಲಿ 37 ಮಿಲಿಯನ್ಗೂ ಹೆಚ್ಚು ಜನರು ಮತ ಚಲಾಯಿಸಲು ಅರ್ಹರಾಗಿದ್ದಾರೆ. 90ಕ್ಕೂ ಹೆಚ್ಚು ಪಕ್ಷಗಳು ಸಂಸತ್ತಿನ ಮೇಲ್ಮನೆ ಮತ್ತು ಕೆಳಮನೆಗಳ ಸ್ಥಾನಗಳಿಗೆ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿವೆ.
2015ರಲ್ಲಿ ನಡೆದ ಚುನಾವಣೆಯಲ್ಲಿ ಎನ್‌ಎಲ್‌ಡಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಐದು ದಶಕಗಳ ಮಿಲಿಟರಿ ನಿರ್ದೇಶನದ ಆಡಳಿತಕ್ಕೆ ಬ್ರೇಕ್ ಹಾಕಿತ್ತು. ಆಂಗ್ ಸಾನ್ ಸೂ ಕಿ ಅವರು ಸ್ಟೇಟ್ ಕೌನ್ಸಿಲರ್ ಆಗಿ ಆಯ್ಕೆಯಾಗಿದ್ದರು. ಎನ್‌ಎಲ್‌ಡಿ ಪಕ್ಷದ ಯು ವಿನ್ ಮೈಂಟ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು.
ಅಧಿಕಾರಕ್ಕೆ ಬರುವ ಮೊದಲು ದೀರ್ಘಕಾಲದಿಂದ ರಾಜಕೀಯ ಅಂಗಳದಲ್ಲಿದ್ದ ಸೂ ಕಿ, ಮ್ಯಾನ್ಮಾರ್‌ನ ಮಿಲಿಟರಿ ಆಡಳಿತದ ವಿರುದ್ಧದ ಅಹಿಂಸಾತ್ಮಕ ಹೋರಾಟಕ್ಕಾಗಿ ಮೆಚ್ಚುಗೆ ಪಡೆದಿದ್ದರು ಮತ್ತು 1991ರ ಶಾಂತಿ ನೊಬೆಲ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು.
ಕೋವಿಡ್ ಮಾರ್ಗಚೂಚಿಗಳು, ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಿ ನಾಳೆ ಚುನಾವಣೆ ನಡೆಯುತ್ತಿದ್ದರೂ ಸಹ ಮತದಾನ ಮಾಡುವವರ ಸಂಖ್ಯೆ ಕಡಿಮೆಯಾಗುವ ಸಾಧ್ಯತೆಯಿದೆ. ಆದರೆ ಇದು ಎನ್‌ಎಲ್‌ಡಿ ಪಕ್ಷದ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದಿಲ್ಲ.
ಮ್ಯಾನ್ಮಾರ್‌ನಲ್ಲಿ ರೋಹಿಂಗ್ಯಾಗಳ ಮೇಲಿನ ದಬ್ಬಾಳಿಕೆಯನ್ನು ತಡೆಯಲು ವಿಫಲವಾಗಿದ್ದೊಂದು ಬಿಟ್ಟರೆ ಸೂ ಕಿ ಅವರನ್ನು ದೂರುವ ಯಾವುದೇ ಇತರ ಘಟನೆಗಳಿಲ್ಲ. ರಾಷ್ಟ್ರದೆಲ್ಲೆಡೆ ಆಂಗ್ ಸಾನ್ ಸೂ ಕಿ ಅವರ ಪ್ರಭಾವ ಎಷ್ಟಿದೆಯೆಂದರೆ ಮ್ಯಾನ್ಮಾರ್ ಅಧ್ಯಕ್ಷರಾಗಿ ಆಯ್ಕೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಲಾಗುತ್ತಿದೆ.