ಕರಾಚಿ: ದಕ್ಷಿಣ ಪಾಕಿಸ್ತಾನದ ಕರಾಚಿಯಲ್ಲಿ ಇಂದು ನಡೆದ ಗುಂಡಿನ ದಾಳಿಯಲ್ಲಿ ಚೀನಾ ಪ್ರಜೆಯೊಬ್ಬ ಗಾಯಗೊಂಡಿದ್ದಾನೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ. ಸ್ಫೋಟಕ ತುಂಬಿದ್ದ ಬಸ್ ಸ್ಫೋಟಗೊಂಡಿದ್ದು ಚೀನಾದ 9 ಮಂದಿ ಕಾರ್ಮಿಕರು ಸಾವನ್ನಪ್ಪಿದ ಎರಡು ವಾರಗಳ ನಂತರ ಈ ಘಟನೆ ನಡೆದಿದೆ.
ಕರಾಚಿ ಸಮೀಪದ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಚೀನಿ ಪ್ರಜೆಗಳು ತೆರಳುತ್ತಿದ್ದ ಕಾರಿನ ಮೇಲೆ ಮುಖವಾಡ ಧರಿಸಿದ್ದ ಹಲ್ಲೆಕೋರರು ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಓರ್ವ ಪ್ರಯಾಣಿಕನ ಕೈಗೆ ಗಾಯವಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಅದೃಷ್ಟವಶಾತ್ ಆತನ ದೇಹದ ಯಾವುದೇ ಪ್ರಮುಖ ಭಾಗಕ್ಕೆ ಗುಂಡು ತಾಗದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಕರಾಚಿಯ ದಕ್ಷಿಣ ಜಿಲ್ಲೆಯ ಪೊಲೀಸ್ ಮುಖ್ಯಸ್ಥ ಜಾವೇದ್ ಅಕ್ಬರ್ ರಿಯಾಜ್ ತಿಳಿಸಿದ್ದಾರೆ.
ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಜಾವೋ ಲಿಜಿಯಾನ್ ಕೂಡ ಈ ಘಟನೆಯನ್ನು ದೃಢಪಡಿಸಿದ್ದಾರೆ. ಚೀನಾ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಪ್ರಕರಣ ಇನ್ನೂ ತನಿಖೆ ಹಂತದಲ್ಲಿದೆ ಎಂದು ಜಾವೋ ಹೇಳಿದ್ದಾರೆ.