ಕಾಬೂಲ್(ಅಫ್ಘಾನಿಸ್ಥಾನ): ಇಲ್ಲಿನ ಉತ್ತರ ಪ್ರಾಂತ್ಯದ ಫರಿಯಾಬ್ ಮತ್ತು ಪೂರ್ವ ಪ್ರಾಂತ್ಯದ ಖೋಸ್ಟ್‌ನಲ್ಲಿ ಇಂದು ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಸೈನಿಕರು ಸೇರಿದಂತೆ 9 ಜನರು ಸಾವನ್ನಪ್ಪಿ, 16 ಮಂದಿ ಗಾಯಗೊಂಡಿದ್ದಾರೆ.
ಫರಿಯಾಬ್ ಪ್ರಾಂತ್ಯದ ದಾವ್ಲತ್ ಅಬಾದ್ ಜಿಲ್ಲೆಯಲ್ಲಿ ನಡೆದ ಕಾರ್ ಬಾಂಬ್ ಸ್ಫೋಟದಲ್ಲಿ ಮೂವರು ನಾಗರಿಕರು ಸಾವನ್ನಪ್ಪಿದ್ದಾರೆ. ಐವರು ನಾಗರಿಕರು ಸೇರಿದಂತೆ 10 ಜನರು ಗಾಯಗೊಂಡಿದ್ದಾರೆ ಎಂದು ಖಾಸಗಿ ವಾಹಿನಿಯೊಂದು ಉಲ್ಲೇಖಿಸಿದೆ ಎಂದು ಪ್ರಾಂತೀಯ ಪೊಲೀಸ್ ವಕ್ತಾರ ಅಬ್ದುಲ್ ಕರೀಮ್ ಯೂರಿಶ್ ಹೇಳಿದ್ದಾರೆ.
ಇನ್ನೊಂದು ಘಟನೆಯಲ್ಲಿ ಖೋಸ್ಟ್ ಪ್ರಾಂತ್ಯದ ಯಾಕ್ಬಿ ಜಿಲ್ಲೆಯಲ್ಲಿ ಮಿಲಿಟರಿ ವಾಹನವನ್ನು ಗುರಿಯಾಗಿಸಿಕೊಂಡ ಸ್ಫೋಟದಲ್ಲಿ ನಾಲ್ವರು ನಾಗರಿಕರು ಸೇರಿದಂತೆ 6 ಜನರು ಸಾವನ್ನಪ್ಪಿದ್ದು, ಆರು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಲ್ಲದೇ ಇಂದು ಮಧ್ಯಾಹ್ನ ಮಧ್ಯ ಪ್ರಾಂತ್ಯದ ಪರ್ವಾನ್‌ನಲ್ಲಿ ಅಂಗಡಿಯೊಂದರ ಮಾಲೀಕರ ನಡುವೆ ನಡೆದ ಘರ್ಷಣೆಯಲ್ಲಿ 4 ಜನರು ಸಾವನ್ನಪ್ಪಿದ್ದಾರೆ ಹಾಗೂ ಮೂವರು ಗಾಯಗೊಂಡಿದ್ದಾರೆ ಎಂದು ಪ್ರಾಂತೀಯ ಪೊಲೀಸ್ ಅಧಿಕಾರಿ ಮೊಹಮ್ಮದ್ ಸಾದಿಕ್ ಹಾಶಿಮಿ ತಿಳಿಸಿದ್ದಾರೆ.
ಮಂಗಳವಾರ ಅಫ್ಘಾನಿಸ್ತಾನದ ನಾಗರಿಕರು ಕಾಬೂಲ್, ಕುಂಡುಜ್, ಖೋಸ್ಟ್, ಮತ್ತು ಫರಿಯಾಬ್ ಸೇರಿದಂತೆ ನಾಲ್ಕು ಪ್ರಾಂತ್ಯಗಳಲ್ಲಿ ನಡೆದ ಭೀಕರ ದಾಳಿಗೆ ತತ್ತರಿಸಿ ಹೋಗಿದ್ದಾರೆ.
ಆದ್ರೆ ಈ ಘಟನೆಯ ಬಗ್ಗೆ ತಾಲಿಬಾನ್ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.