ಬೀಜಿಂಗ್: ಚೀನಾದ ವುಹಾನ್ ಮತ್ತು ಸೂಜೌ ಪ್ರದೇಶದಲ್ಲಿ ಬೀಸಿದ ಎರಡು ಪ್ರಬಲ ಬಿರುಗಾಳಿಯಿಂದಾಗಿ 7 ಮಂದಿ ಮೃತಪಟ್ಟಿದ್ದು, 239 ಮಂದಿ ಗಾಯಗೊಂಡಿದ್ದಾರೆ ಎಂದು ಕ್ಸಿನುವಾ ಸುದ್ದಿ ಸಂಸ್ಥೆ ಶನಿವಾರ ವರದಿ ಮಾಡಿದೆ.
ವುಹಾನ್‌ನಲ್ಲಿ ಶುಕ್ರವಾರ ರಾತ್ರಿ 8.39ಕ್ಕೆ ಬಿರುಗಾಳಿ ಬೀಸಿದ್ದು, ಇದರ ವೇಗವು ಪ್ರತಿ ಸೆಕೆಂಡಿಗೆ 23.9 ಮೀಟರ್ ಇತ್ತು. ಈ ಬಿರುಗಾಳಿಯಲ್ಲಿ ಆರು ಮಂದಿ ಮೃತಪಟ್ಟಿದ್ದು, 218 ಮಂದಿ ಗಾಯಗೊಂಡಿದ್ದಾರೆ. ಹಾಗೆ ಹಲವು ಕಟ್ಟಡಗಳು, ಮರಗಳು ಉರುಳಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಈ ಬಿರುಗಾಳಿಯಲ್ಲಿ 27 ಮನೆಗಳು, ಎರಡು ಕ್ರೇನ್‌ಗಳು ಮತ್ತು 8000 ಚ.ಮೀ. ನಿರ್ಮಾಣ ಸ್ಥಳದಲ್ಲಿದ್ದ ಶೆಡ್‌ಗಳು ಹಾನಿಯಾಗೀಡಾಗಿವೆ ಎಂದು ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸೂಜೌ ಪಟ್ಟಣದಲ್ಲಿ ಶುಕ್ರವಾರ ರಾತ್ರಿ 7 ಗಂಟೆಗೆ ಮತ್ತೊಂದು ಬಿರುಗಾಳಿ ಎದ್ದಿದ್ದು, ಇದರಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದು, 21 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.