ಕಾಬೂಲ್ (ಅಫ್ಘಾನಿಸ್ತಾನ): ತಾಲಿಬಾನ್ ಉಗ್ರರಿಂದ ತಪ್ಪಿಸಿಕೊಂಡು ಪಲಾಯನವಾಗಲೆಂದು ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೃಹತ್ ಸಂಖ್ಯೆಯಲ್ಲಿ ಜನರು ಸೇರಿದ್ದು, ಈ ವೇಳೆ ನೂಕುನುಗ್ಗಲು ಉಂಟಾಗಿ ಕಾಲ್ತುಳಿತಕ್ಕೊಳಗಾಗಿ ಏಳು ಮಂದಿ ಅಫ್ಘಾನಿಸ್ತಾನದ ಪ್ರಜೆಗಳು ಮೃತಪಟ್ಟಿದ್ದಾರೆ.
ಏರ್ಪೋರ್ಟ್‌ನಲ್ಲಿ ಗುಂಪು ಸೇರಿದ್ದ ನಾಗರಿಕರನ್ನು ಓಡಿಸಲು ತಾಲಿಬಾನ್ ಉಗ್ರರು ಗಾಳಿಯಲ್ಲಿ ಗುಂಡು ಹಾರಿಸಿದ್ದರಿಂದ ಗಾಬರಿಗೊಂಡ ಜನರು ಕಕ್ಕಾಬಿಕ್ಕಿಯಾಗಿ ಓಡಿದ್ದಾರೆ. ಈ ವೇಳೆ ಕಾಲ್ತುಳಿತ ಉಂಟಾಗಿ ಜನರು ಪ್ರಾಣ ಕಳೆದು ಕೊಂಡಿದ್ದಾರೆ ಎಂದು ಬ್ರಿಟಿಷ್ ಸೇನೆ ಮಾಹಿತಿ ನೀಡಿದೆ.
ಯುಎಸ್ ಸರ್ಕಾರದ ಪ್ರತಿನಿಧಿಯಿಂದ ಸೂಚನೆ ಇಲ್ಲದೆ ಕಾಬೂಲ್ ವಿಮಾನ ನಿಲ್ದಾಣಕ್ಕೆ ತೆರಳದಂತೆ ಅಮೆರಿಕ ರಾಯಭಾರ ಕಚೇರಿಯು ನಿನ್ನೆ ಆದೇಶ ನೀಡಿದೆ. ಇಲ್ಲಿನ ಪರಿಸ್ಥಿತಿಗಳು ದೊಡ್ಡ ಸವಾಲಾಗಿಯೇ ಉಳಿದಿದ್ದು, ಜನರ ರಕ್ಷಣೆ-ಸುರಕ್ಷತೆಗಾಗಿ ನಮ್ಮ ಪ್ರಯತ್ನ ನಾವು ಮಾಡುತ್ತಿದ್ದೇವೆ ಎಂದು ಆಫ್ಘನ್ ರಕ್ಷಣಾ ಸಚಿವಾಲಯ ಹೇಳಿಕೆ ನೀಡಿದೆ. ಆದರೆ ಅಲ್ಲಿನ ಜನರು ದೇಶ ತೊರೆಯಬೇಕೆಂದರೇ ಕಾಬೂಲ್ ಏರ್ಪೋರ್ಟ್ ಒಂದೇ ಕೇಂದ್ರ ಬಿಂದುವಾಗಿದ್ದು, ಪ್ರತಿನಿತ್ಯ ಜನಸಂದಣಿ ಉಂಟಾಗುತ್ತಿದೆ.
ಇದನ್ನೂ ಓದಿ: ನೋಡಿ: ಕಾಬೂಲ್ ಏರ್ಪೋರ್ಟ್‌ನಲ್ಲಿ ಕಂಡುಬಂದ ಮನಕಲುಕುವ ದೃಶ್ಯಗಳು..
ಕಳೆದ ಭಾನುವಾರ ಇಡೀ ದೇಶವನ್ನು ಸಂಪೂರ್ಣವನ್ನು ತಾಲಿಬಾನ್ ವಶಕ್ಕೆ ಪಡೆದಿದ್ದು, ಅಂದಿನಿಂದಲೂ ಜನರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ವಿಮಾನದ ರೆಕ್ಕೆಯ ಮೇಲೆಲ್ಲಾ ಕುಳಿತು ಪಲಾಯನ ಮಾಡುತ್ತಿರುವ, ಈ ವೇಳೆ ಕೆಳಗೆ ಜಾರಿ ಬೀಳುವ ದೃಶ್ಯಗಳನ್ನೂ ನಾವು ನೋಡಿದ್ದೇವೆ. ಅಲ್ಲದೇ ಆ.18ರಂದು ಕಾಬೂಲ್ ಏರ್ಪೋರ್ಟ್‌ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಸುಮಾರು 40 ಮಂದಿ ಪ್ರಜೆಗಳು ಸಾವನ್ನಪ್ಪಿದ್ದರು.